ಮೆಟ್ರಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಚಿನ್ನಾಪುರದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಲವು ತಿಂಗಳುಗಳಿಂದ ಕೆಟ್ಟು ನಿಂತಿದೆ.
ಕಂಪ್ಲಿ: ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹದೆಗೆಟ್ಟ ಪರಿಣಾಮ ಗ್ರಾಮಸ್ಥರು ನಿತ್ಯ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆಟ್ರಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಚಿನ್ನಾಪುರದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಲವು ತಿಂಗಳುಗಳಿಂದ ಕೆಟ್ಟು ನಿಂತಿದೆ.ಗ್ರಾಮದ ನಿವಾಸಿಗಳು ಪ್ರತಿದಿನ ಮೆಟ್ರಿ ಗ್ರಾಮಕ್ಕೆ ತೆರಳಿ ಸೈಕಲ್, ದ್ವಿಚಕ್ರ ವಾಹನಗಳ ಮೂಲಕ ನೀರು ತರುತ್ತಿದ್ದಾರೆ. ಕೆಲವರು ಕೊಡಗಳನ್ನು ಹೊತ್ತು ಬರುತ್ತಾರೆ.
ಇನ್ನೂ ಕೆಲ ಕುಟುಂಬಗಳು ಗ್ರಾಮದಲ್ಲೇ ಲಭ್ಯವಿರುವ ಫ್ಲೋರೈಡ್ ಯುಕ್ತ ಬೋರ್‌ವೆಲ್ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ. ಆದರೆ ಈ ನೀರಿನ ಬಳಕೆಯಿಂದ ಮೊಣಕಾಲು ನೋವು, ಬೆನ್ನು ನೋವು ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಈಗಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ನೀರಿನ ಘಟಕವನ್ನು ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಿನ್ನಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಲವು ತಿಂಗಳುಗಳಿಂದ ಕೆಟ್ಟು ನಿಂತಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಪ್ರತಿದಿನ ದೂರದ ಊರಿಗೆ ಹೋಗಿ ನೀರು ತರಬೇಕಾದ ಅನಿವಾರ್ಯತೆ ಉಂಟಾಗಿದೆ. ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಅಧಿಕಾರಿಗಳು ಇನ್ನೂ ವಿಳಂಬ ಮಾಡದೇ ತಕ್ಷಣ ನೀರಿನ ಘಟಕವನ್ನು ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ಗ್ರಾಮಸ್ಥ ಕೃಷ್ಣಪ್ಪ.