ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಸುಲ್ತಾನ್‌ರಸ್ತೆಯ ಪಟ್ಟಲದಮ್ಮ ದೇವಸ್ಥಾನದ ಸಮೀಪದ ದೊಡ್ಡಕೆರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನವನದ ವಾಕಿಂಗ್ ರಸ್ತೆಯನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ವಚ್ಛಗೊಳಿಸಿ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಪ್ರಶಂಸೆಗೆ ಪಾತ್ರರಾದರು.ಪಟ್ಟಣದ ನಿವಾಸಿಗಳು ಹೆದ್ದಾರಿ ರಸ್ತೆ ಬದಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿ ಸಾವು- ನೋವುಗಳು ಆಗಿಂದಾಗ್ಗೆ ನಡೆಯುತ್ತಿರುವುದನ್ನು ತಪ್ಪಿಸಲು ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಹಿಂದಿನ ಅಧಿಕಾರದ ಅವಧಿಯಲ್ಲಿ ಕೊಟ್ಯಾಂತರ ರು. ಅನುದಾನದಲ್ಲಿ ದೊಡ್ಡ ಕೆರೆ ಅಭಿವೃದ್ಧಿಪಡಿಸಿದ್ದರು.
ಜೊತೆಗೆ ಕೆರೆ ಸುತ್ತಲೂ ವಾಯು ವಿಹಾರಕ್ಕೆ ವಾಕಿಂಗ್ ಟ್ರ್ಯಾಕ್ ನಿರ್ಮಿಸಿ, ವಿವಿಧ ರೀತಿಯ ಸೌಂದರ್ಯವರ್ಧಕ ಹೂವು ಹಾಗೂ ಇತರೆ ಗಿಡಗಳನ್ನು ಬೆಳೆಸಿ ವಾಯು ವಿಹಾರಕ್ಕೆ ಉತ್ತಮ ವಾತವರಣವನ್ನು ಕಲ್ಪಿಸಿದ್ದರ ಹಿನ್ನೆಲೆಯಲ್ಲಿ ಪ್ರತಿದಿನ ಸಾವಿರಾರು ಮಂದಿ ವಾಯುವಿಹಾರದ ಮೂಲಕ ಪ್ರಯೋಜನವನ್ನು ಪಡೆದುಕೊಂಡಿದ್ದರು.ಸರಿಯಾದ ನಿರ್ವಹಣೆ ಕೊರತೆಯಿಂದ ಕಳೆದ ನಾಲ್ಕೈದು ವರ್ಷಗಳಿಂದ ವಾಕಿಂಗ್ ಟ್ರ್ಯಾಕ್ ಬದಿಯಲ್ಲಿ ಗಿಡ, ಗಂಟೆಗಳು ಬೆಳೆದು ಹಾವುಗಳು ಹೇರಳವಾಗಿ ಕಂಡು ಬರುತ್ತಿದ್ದವು. ಸಾರ್ವಜನಿಕರು ಇತ್ತ ಕಡೆ ಬರುವುದನ್ನು ಕಡಿಮೆ ಮಾಡಿದ್ದರು. ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಸಲಹೆ ಮೇರೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸುಮಾರು 3 ಕಿ,ಮೀ ದೂರವಿರುವ ವಾಕಿಂಗ್ ಟ್ರ್ಯಾಕ್ ಸ್ವಚ್ಛಗೊಳಿಸಿದರು.
ನಂತರ ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಸೇವೆ ಮೂಲಕ ಕೆರೆಯ ಉದ್ಯಾನವನ್ನು ಸ್ವಚ್ಛಗೊಳಿಸಿರುವುದು ಪ್ರಶಂಸನೀಯ. ಈ ಹಿಂದೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 5 ಕೋಟಿ ರು. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು ಎಂದರು.ಅಂಬೇಡ್ಕರ್ ಭವನದ ಸಮೀಪ ಹಾಗೂ ಕೆರೆಗೆ ಹೊಂದಿಕೊಂಡಂತೆ ಇರುವ ಮಳವಳ್ಳಿ- ಮದ್ದೂರು ಮುಖ್ಯ ರಸ್ತೆ ಸಮೀಪ ಪಾರ್ಕ್ ಗಳನ್ನು ನಿರ್ಮಿಸಿ ಸಾರ್ವಜನಿಕರು ಸಂಸಾರ ಸಮೇತ ಮಾನಸಿಕ ನೆಮ್ಮದಿಯನ್ನು ಅರಸಿ ಬಂದವರಿಗೆ ಉತ್ತಮ ವಾತವರಣವನ್ನು ಕಲ್ಪಿಸಲಾಗಿತ್ತು ಎಂದು ತಿಳಿಸಿದರು.
ಕೆಲ ಕಿಡಿಗೇಡಿಗಳು ಸೋಲಾರ್ ಲೈಟ್‌ಗಳನ್ನು ಕಳ್ಳತನ, ಗಿಡ- ಗಂಟೆಗಳಿಗೆ ಬೆಂಕಿ ಹಾಕುವ ಮೂಲಕ ವ್ಯವಸ್ಥೆಯನ್ನು ಹಾಳು ಮಾಡಿರುವುದನ್ನು ಖಂಡಿಸುತ್ತೇನೆ. ಈ ಹಿಂದಿನ ವೈಭವಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕರ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಗೊಳಿಸಲಾಗುವುದು, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಇಲಾಖೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಮನ್ಮುಲ್ ನಿರ್ದೇಶಕ ಆರ್.ಎನ್ ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ ರಾಜು, ಪುರಸಭೆ ಸದಸ್ಯರಾದ ಎಂ.ಎನ್ ಶಿವಸ್ವಾಮಿ, ರಾಜಶೇಖರ್, ಪ್ರಮೀಳ, ಬಸವರಾಜು, ಆನಂದ್, ಮಾರೇಹಳ್ಳಿ ಬಸವರಾಜು, ಸಂತೋಷ್, ಆಯೂಬ್ ಮುಖಂಡರಾದ ಮಾರ್ಕಾಲು ಮಾಧು, ನಂಜುಂಡಸ್ವಾಮಿ, ಚೌಡಪ್ಪ, ಲಿಂಗರಾಜು, ವೇದಮೂರ್ತಿ, ಕಿರಣ್‌ಶಂಕರ್, ದೀಪು, ರೋಹಿತ್‌ಗೌಡ, ಕೃಷ್ಣ, ಸತೀಶ್, ಬಂಕ್‌ಮಹದೇವು, ರವಿ, ಪೇಟೆ ಬೀದಿ ಮಹದೇವ, ಚೇತನ್ ಸೇರಿದಂತೆ ಇತರರು ಇದ್ದರು.