ಸಾರಾಂಶ
ಶಿಗ್ಗಾಂವಿ: ಮಹಾತ್ಮ ಗಾಂಧೀಜಿ, ಲಾಲ ಬಹುದ್ದೂರ ಶಾಸ್ತ್ರಿ ಅವರ ಜಯಂತಿಯ ಅಂಗವಾಗಿ ಪುರಸಭೆ ಶಿಗ್ಗಾಂವಿ ಮತ್ತು ತಾಲೂಕಿನ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳ ಸಹಭಾಗಿತ್ವದಲ್ಲಿ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.ಪಟ್ಟಣದ ಪುರಸಭೆಯಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛತಾ ಸಪ್ತಾಹ ಕಾರ್ಯಕ್ರಮದ ಭಾಗವಾಗಿ ತಾಲೂಕಿನ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಸ್ವಚ್ಛಗೊಳಿಸಲಾಗಿದ್ದು ಇಂದು ಪಟ್ಟಣದ ಹೊಸ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಪಟ್ಟಣದ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಸೇರಿದಂತೆ ವಾರ್ಡುಗಳಲ್ಲಿಯೂ ಸ್ವಚ್ಛತಾ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ, ಸದಸ್ಯ ಪರಶುರಾಮ ಸೊನ್ನದ ಮಾತನಾಡಿ, ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಮಹಾತ್ಮಾ ಗಾಂಧೀಜಿಯವರು ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ವಿಷಯಗಳು ಹರಿದಾಡುತ್ತಿದ್ದು ಅಂತಹ ವಿಷಯಗಳನ್ನು ಹರಿಬಿಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಸಾರ್ವಜನಿಕರೇ ಅಂತವರ ಮೇಲೆ ನೇರವಾಗಿ ಕೇಸು ದಾಖಲೆ ಮಾಡುವಂತಾಗಬೇಕು ಎಂದರು.ಪಟ್ಟಣದ ಪುರಸಭೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹುದ್ದೂರ ಶಾಸ್ತ್ರಿ ಅವರ ಜಯಂತಿಯ ಅಂಗವಾಗಿ ಮಹಾತ್ಮ ಗಾಂಧೀಜಿ, ಲಾಲ ಬಹುದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅನುರಾಧಾ ಮಾಳ್ವದೆ, ಶಾಂತಾಬಾಯಿ ಸುಭೇದಾರ, ಬಿಇಒ ಎಂ.ಬಿ. ಅಂಬಿಗೇರ, ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯಾ, ರಾಜೇಂದ್ರ ಅರಳೇಶ್ವರ, ಗಣೇಶ, ಇಂದುಧರ ಮುತ್ತಳ್ಳಿ, ವಿ.ಎಸ್. ಪಾಟೀಲ, ಗೀತಾಂಜಲಿ ತೆಪ್ಪದ, ಉಮೇಶ ಎಸ್.ಆರ್., ನಾಗಪ್ಪಾ ಬೆಂತೂರ, ಸುಭಾಶ ಚೌವ್ಹಾಣ, ರಮೇಶ ವನಹಳ್ಳಿ, ಜಾಫರಖಾನ ಪಠಾಣ ಇತರರಿದ್ದರು.