ಕಡಲತೀರ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳು ಸಮುದ್ರ ಜೀವಿಗಳಿಗೆ ಪ್ರಮುಖ ಆವಾಸಸ್ಥಾನವಾಗಿದ್ದು, ಕರಾವಳಿ ಸಮುದಾಯಗಳ ಜೀವನೋಪಾಯಕ್ಕೂ ಆಧಾರವಾಗಿವೆ.

ಕಾರವಾರ: ಕಡಲತೀರಗಳ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಕಡಲ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಐಸಿಎಆರ್ ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಮಹೇಶ್ ಹೇಳಿದರು.ಶುಕ್ರವಾರ ಕಾರವಾರದ ಅಲಿಗದ್ದ ಕಡಲ ತೀರದಲ್ಲಿ ಐಸಿಎಆರ್ ಸಿಎಂಎಫ್‌ಆರ್‌ಐ ಕಾರವಾರ ಪ್ರಾದೇಶಿಕ ಕೇಂದ್ರ ಹಾಗೂ ರಿಲಯನ್ಸ್ ಫೌಂಡೇಶನ್ ಸಹಯೋಗದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಅಂಗವಾಗಿ ‘ಸ್ವಚ್ಛತೆಯಲ್ಲಿ ಸಹಭಾಗಿತ್ವ; ಸ್ವಚ್ಛ ಭಾರತ, ವಿಕಸಿತ ಭಾರತ’ ಘೋಷವಾಕ್ಯದಡಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.ಕಡಲತೀರ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳು ಸಮುದ್ರ ಜೀವಿಗಳಿಗೆ ಪ್ರಮುಖ ಆವಾಸಸ್ಥಾನವಾಗಿದ್ದು, ಕರಾವಳಿ ಸಮುದಾಯಗಳ ಜೀವನೋಪಾಯಕ್ಕೂ ಆಧಾರವಾಗಿವೆ. ಪ್ಲಾಸ್ಟಿಕ್ ತ್ಯಾಜ್ಯ, ಬಳಕೆಯಲ್ಲದ ಮೀನುಗಾರಿಕಾ ಬಲೆಗಳು ಹಾಗೂ ಇತರ ಸಮುದ್ರ ತ್ಯಾಜ್ಯಗಳು ಸಮುದ್ರ ಜೀವವೈವಿಧ್ಯಕ್ಕೆ ಅಪಾಯ ಉಂಟುಮಾಡುತ್ತವೆ. ಅಲ್ಲದೆ, ಕರಾವಳಿ ಪರಿಸರ ಹದಗೆಡುವುದರಿಂದ ಮೀನುಗಾರಿಕೆ ಅವಲಂಬಿತ ಸಮುದಾಯಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸಮರ್ಪಕವಾಗಿ ವಿಲೇವಾರಿ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.ಎಂಎಫ್‌ಆರ್‌ಐ ಪ್ರಧಾನ ವಿಜ್ಞಾನಿ ಡಾ. ಕಾಳಿದಾಸ್ ಮಾತನಾಡಿ, ಕಡಲತೀರಗಳಲ್ಲಿ ಸ್ವಚ್ಛತೆ ಕಾಪಾಡುವುದರಿಂದ ಪ್ಲಾಸ್ಟಿಕ್ ಹಾಗೂ ಇತರ ಮಾಲಿನ್ಯಕಾರಕ ವಸ್ತುಗಳು ಸಮುದ್ರ ಸೇರುವುದನ್ನು ತಡೆಯುವ ಮೂಲಕ ಸಮುದ್ರ ಜೀವಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಬಹುದು ಎಂದರು.ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಸಂಯೋಜಕ ಸಂತೋಷ, ಸಿಎಂಎಫ್‌ಆರ್‌ಐ ಸಿಬ್ಬಂದಿ, ಕಾರವಾರ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು, ವಿದ್ಯಾರ್ಥಿಗಳು ಹಾಗೂ ಅಲಿಗದ್ದ ಸ್ಥಳೀಯ ಮೀನುಗಾರರು ಭಾಗವಹಿಸಿ ಕಡಲತೀರ ಸ್ವಚ್ಛಗೊಳಿಸಿದರು.ಎಂಎಫ್‌ಆರ್‌ಐ ವಿಜ್ಞಾನಿಗಳಾದ ಡಾ. ರಘು ರಾಮುಡು, ಡಾ. ತನ್ವೀರ್ ಹುಸೇನ್ ಅಭಿಯಾನವನ್ನು ಸಂಯೋಜಿಸಿದರು.