ದೀಪಾವಳಿ: ನಗರಸಭೆ ಉಪಾಧ್ಯಕ್ಷ, ಪೌರಾಯುಕ್ತರಿಂದ ಸ್ವಚ್ಛತೆ ಪರಿಶೀಲನೆ

| Published : Nov 04 2024, 12:36 AM IST

ದೀಪಾವಳಿ: ನಗರಸಭೆ ಉಪಾಧ್ಯಕ್ಷ, ಪೌರಾಯುಕ್ತರಿಂದ ಸ್ವಚ್ಛತೆ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ನಗರದಲ್ಲಿ ಬೆಳ್ಳಂಬೆಳಗ್ಗೆ ನಗರಸಭೆ ಉಪಾಧ್ಯಕ್ಷ ಜಂಬಣ್ಣ ಹಾಗೂ ಪೌರಾಯುಕ್ತ ಪಿ.ಸುಬ್ರಹ್ಮಣ್ಯ ವಿವಿಧ ಬಡಾವಣೆಗಳು ಹಾಗೂ ಮುಖ್ಯ ರಸ್ತೆಗಳಿಗೆ ಭೇಟಿ ನೀಡಿ, ದೀಪಾವಳಿ ಹಬ್ಬ ಮುಗಿದ ಹಿನ್ನೆಲೆ ಸ್ವಚ್ಛತಾ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹರಿಹರ ನಗರದಲ್ಲಿ ಬೆಳ್ಳಂಬೆಳಗ್ಗೆ ನಗರಸಭೆ ಉಪಾಧ್ಯಕ್ಷ ಜಂಬಣ್ಣ ಹಾಗೂ ಪೌರಾಯುಕ್ತ ಪಿ.ಸುಬ್ರಹ್ಮಣ್ಯ ವಿವಿಧ ಬಡಾವಣೆಗಳು ಹಾಗೂ ಮುಖ್ಯ ರಸ್ತೆಗಳಿಗೆ ಭೇಟಿ ನೀಡಿ, ದೀಪಾವಳಿ ಹಬ್ಬ ಮುಗಿದ ಹಿನ್ನೆಲೆ ಸ್ವಚ್ಛತಾ ಪರಿಶೀಲನೆ ನಡೆಸಿದರು.

ದಾವಣಗೆರೆ ರಸ್ತೆಯ 1ನೇ ರೈಲ್ವೆ ಫ್ಲೈ ಓವರ್‌ನಿಂದ ಕೆಇಬಿವರೆಗೆ, ಮುಖ್ಯರಸ್ತೆ ಡಿವೈಡರ್ ಮಧ್ಯೆಯ ಮಣ್ಣಿನ ರಾಶಿ, ಹರಿಹರೇಶ್ವರ ದೇವಸ್ಥಾನದ ರಸ್ತೆ, 18, 19 ಹಾಗೂ 20ನೇ ವಾರ್ಡುಗಳು, ರಾಜಕಾಲುವೆ ಮುಂತಾದ ಸ್ಥಳಗಳಿಗೆ ಪೌರಕಾರ್ಮಿಕರು ಹಾಗೂ ಕಸದ ವಾಹನ ಜತೆ ಭೇಟಿ ನೀಡಿದರು. ಕಳೆದ 3 ದಿನಗಳಿಂದ ದೀಪಾವಳಿ ಹಬ್ಬ ಆಚಿರಿಸಿರುವ ನಗರದ ಜನತೆ ಮನೆಗಳು, ಅಂಗಡಿಗಳು ಇನ್ನಿತರ ಕಸಗಳನ್ನು ರಸ್ತೆಯ ಬದಿ, ಖಾಲಿ ನಿವೇಶನ ಹಾಗೂ ರಾಜ ಕಾಲುವೆಗಳಲ್ಲಿ ವಿಲೇವಾರಿ ಮಾಡಿದ್ದರು. ಇವೆಲ್ಲವನ್ನೂ ವೀಕ್ಷಿಸಿದ ಅವರು ನಗರಸಭೆ ವಾಹನ ಹಾಗೂ ಜೆಸಿಬಿ ಮೂಲಕ ಪೌರಕಾರ್ಮಿಕರ ಸಹಾಯದಿಂದ ಸ್ವಚ್ಛಗೊಳಿಸುವ ಕಾರ್ಯಗಳ ಕೈಗೊಂಡರು.

ಉಪಾಧ್ಯಕ್ಷ ಜಂಬಣ್ಣ ಈ ಸಂದರ್ಭ ಮಾತನಾಡಿ, ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರು ತಮ್ಮ ವ್ಯಾಪ್ತಿಯ ಬಡಾವಣೆಗಳಲ್ಲಿ ಇರುವ ಚರಂಡಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿನ ಕಸಗಳ ಸೂಕ್ತ ವಿಲೇವಾರಿಗೆ ಪ್ರಥಮ ಆದ್ಯತೆ ನೀಡಬೇಕು. ಪ್ರಮುಖ ರಸ್ತೆಗಳ ಡಿವೈಡರ್ ಬಳಿ ಕಸ ಸಂಗ್ರಹ ಆಗುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಧೂಳು ಹಾರಿ, ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತದೆ. ಆದ್ದರಿಂದ ಕಾಲಕಾಲಕ್ಕೆ ಡಿವೈಜರ್ ಬಳಿ ಇರುವ ಕಸ ವಿಲೇವಾರಿ ಮಾಡಬೇಕು ಎಂದರು.

ಪೌರಾಯುಕ್ತ ಪಿ.ಸುಬ್ರಮಣ್ಯ ಮಾತನಾಡಿ, ಸಾರ್ವಜನಿಕರು ರಸ್ತೆಯ ಅಕ್ಕಪಕ್ಕ ಹಾಗೂ ಖಾಲಿ ನಿವೇಶನಗಳಲ್ಲಿ ಮನೆಗಳ ತ್ಯಾಜ್ಯಗಳ ಎಸೆಯಬಾರದು. ಬದಲಿಗೆ ಮನೆಗಳ ಬಳಿಗೆ ಬರುವ ನಗರಸಭೆ ಕಸ ವಿಲೇವಾರಿ ವಾಹನಗಳಿಗೇ ನೀಡಬೇಕು. ಇದರಿಂದ ಮನೆ ಸುತ್ತಮುತ್ತಲಿನ ಪರಿಸರ ಹಾಗೂ ರಸ್ತೆ ಸ್ವಚ್ಛತೆ ಕಾಪಾಡಬಹುದು. ಅನಾರೋಗ್ಯಗಳನ್ನು ದೂರ ಮಾಡಬಹುದು ಎಂದರು.

ಆರೋಗ್ಯ ನಿರೀಕ್ಷಕ ಸಂತೋಷ ನಾಯ್ಕ್, ಪೌರ ಸಿಬ್ಬಂದಿ ಇದ್ದರು.

- - -

-03ಎಚ್‍ಆರ್‍ಆರ್ 1 ಹಾಗೂ 1ಎ:

ಹರಿಹರದಲ್ಲಿ ಉಪಾಧ್ಯಕ್ಷ ಜಂಬಣ್ಣ ಹಾಗೂ ಆಯುಕ್ತ ಪಿ.ಸುಬ್ರಹ್ಮಣ್ಯ ಅವರು ನಗರದ ವಿವಿಧ ಬಡಾವಣೆಗಳು ಹಾಗೂ ಮುಖ್ಯ ರಸ್ತೆಗಳಿಗೆ ಭೇಟಿ ನೀಡಿ, ಸ್ವಚ್ಛತಾ ಕಾರ್ಯ ಪರಿಶೀಲಿಸಿದರು.