ಸಾರಾಂಶ
ಸಮಾರೋಪ ಸಮಾರಂಭ । ವಾರ್ಷಿಕ ಶಿಬಿರ । 7 ದಿನ ಆಯೋಜನೆ
ಕನ್ನಡಪ್ರಭ ವಾರ್ತೆ ಹರಿಹರಜನತೆಯ ಉತ್ತಮ ಆರೋಗ್ಯಕ್ಕೆ ಸ್ವಚ್ಛತೆಯು ಕೂಡ ತುಂಬಾ ಮುಖ್ಯ. ರಾಷ್ಟೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಸ್ವಚ್ಚತೆ ಮತ್ತು ನೈರ್ಮಲ್ಯದ ಕಾರ್ಯವನ್ನು ವಾರಗಳ ಕಾಲ ಗ್ರಾಮದಲ್ಲಿ ನಿರ್ವಹಿಸಿದ್ದಾರೆ. ಇದನ್ನು ಗ್ರಾಮಸ್ಥರು ಮುಂದುವರಿಸಿಕೊಂಡು ಹೋಗುವ ಮೂಲಕ ಉತ್ತಮ ಅರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ ತಾಲೂಕಿನ ಸಲಗನಹಳ್ಳಿ ಗ್ರಾಮದಲ್ಲಿ ೭ ದಿನಗಳ ಕಾಲ ಆಯೋಜಿಸಿದ್ದ ‘ವಿಕಸಿತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ’ ಎಂಬ ಧ್ಯೇಯದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಅಭಿವೃದ್ಧಿಯು ಹಲವರ ಪ್ರಯತ್ನದಿಂದ ಸಾಧ್ಯ. ಅದರಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎನ್.ಎಸ್.ಎಸ್ ಶಿಬಿರದ ಮೂಲಕ ತಮ್ಮ ಅಳಿಲು ಸೇವೆಯನ್ನು ಗ್ರಾಮಕ್ಕೆ ನೀಡಿದ್ದಾರೆ ಎಂದು ಶಿಬಿರಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್.ಎಂ.ಎನ್. ಅವರು ಮಾತನಾಡಿ, ಶಿಬಿರದಿಂದ ಗ್ರಾಮದ ಅನುಕೂಲಕ್ಕಿಂತ, ನಮ್ಮ ವಿದ್ಯಾಥಿಗಳೂ ಸಾಕಷ್ಟು ಕಲಿತಿದ್ದಾರೆ. ಶಿಬಿರದಿಂದ ಗ್ರಾಮದ ಮತ್ತು ಕಾಲೇಜಿನ ಪ್ರತಿಭೆಗಳಿಗೆ ವೇದಿಕೆ ದೊರೆತಿದೆ. ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮದಲ್ಲಿನ ಸಂಘ ಸಂಸ್ಥೆಗಳಿಂದ ಶಿಬಿರಾರ್ಥಿಗಳಿಗೆ ಜೀವನೋಪಾಯದ ಮಾಹಿತಿ ಮತ್ತು ಅನುಭವವು ಸಿಕ್ಕಿದೆ ಎಂದು ಗ್ರಾಮಸ್ಥರ ಸಹಕಾರವನ್ನು ಸ್ಮರಿಸಿದರು.
ಎನ್‌ಎಸ್‌ಎಸ್ ಘಟಕ ಕಾರ್ಯಕ್ರಮಾಧಿಕಾರಿ ಯೋಗೇಶ್.ಕೆ.ಜೆ. ಮಾತನಾಡಿ, ಸಲಗನಹಳ್ಳಿ ಗ್ರಾಮದ ಜನತೆಯಿಂದ ಶಿಬಿರಾರ್ಥಿಗಳು ಮತ್ತು ನಾವು ಹಲವಾರು ಬಗೆಯ ಜ್ಞಾನವನ್ನು ಪಡೆದಿದ್ದು, ಗ್ರಾಮಸ್ಥರಿಗೂ ನಮ್ಮ ಶಿಬಿರದಿಂದ ಅಲ್ಪ ಪ್ರಮಾಣದ ಜಾಗೃತಿ ಕಾರ್ಯವಾಗಿದೆ. ವಿದ್ಯಾಥಿಗಳು ಬದುಕಿಗೆ ಸಹಾಯವಾಗುವ ಕೌಶಲ್ಯಗಳನ್ನು ಕಲಿಯುವುದರೊಂದಿಗೆ, ಗ್ರಾಮೀಣ ಜನತೆಯ ಬದುಕು-ಬವಣೆಯನ್ನು ಅರಿತಿದ್ದಾರೆ. ಸರಾಗವಾಗಿ ಶಿಬಿರ ನಡೆಯುಲು ಗ್ರಾಮದ ಮುಖಂಡರು ಅನುವು ಮಾಡಿದ ಸೌಲಭ್ಯಗಳನ್ನು ನೆನೆದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಸಲಗನಹಳ್ಳಿಯ ಗ್ರಾಪಂ ಸದಸ್ಯ ವಿಜಯ.ಕೆ.ಡಿ, ಮುಖ್ಯ ಶಿಕ್ಷಕಿ ಉಮಾ.ಆರ್, ಶಿಕ್ಷಕ ಅಶ್ವಕ್ ಆಹಮದ್.ಎಂ.ಬಿ., ಎಲ್.ಐ.ಸಿ ಶಿವಣ್ಣ, ಐ.ಕ್ಯೂ.ಎಸ್.ಸಿ ಸಂಯೋಜಕ ಡಾ.ಅನಂತನಾಗ್ ಎಚ್.ಪಿ., ಎನ್‌ಎಸ್‌ಎಸ್ ಘಟಕ-೧ರ ಕಾರ್ಯಕ್ರಮಾಧಿಕಾರಿ ಡಾ.ಗಂಗರಾಜು ಎಸ್., ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ.ಮಂಜುನಾಥ್, ಐ.ಕ್ಯೂ.ಎಸ್.ಸಿ ಸಹಸಂಯೋಜಕ ಅಬ್ದುಲ್ ಬಷೀರ, ಇತಿಹಾಸ ವಿಭಾಗದ ಉಪನ್ಯಾಸಕ ರಾಜಪ್ಪ ಎ. ಹಾಗೂ ಇನ್ನಿತರ ಗ್ರಾಮದ ಮುಖಂಡರು ಇದ್ದರು.