ಸಾರಾಂಶ
ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, "ಸ್ವಚ್ಛತೆಯೇ ಸೇವೆ ಪಾಕ್ಷಿಕ ಅಭಿಯಾನ-2025 " ಅಭಿಯಾನದ ಅಂಗವಾಗಿ, ಇದೇ ಸೆ.17 ರಿಂದ ಅ.2 ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರ್ಯಕ್ರಮ/ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, "ಸ್ವಚ್ಛತೆಯೇ ಸೇವೆ ಪಾಕ್ಷಿಕ ಅಭಿಯಾನ-2025 " ಅಭಿಯಾನದ ಅಂಗವಾಗಿ, ಇದೇ ಸೆ.17 ರಿಂದ ಅ.2 ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರ್ಯಕ್ರಮ/ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ತಿಳಿಸಿದರು.ಕೆಂದ್ರ ಜಲಶಕ್ತಿ ಮಂತ್ರಾಲಯ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರುರವರ ನಿರ್ದೇಶನದಂತೆ, ಪ್ರತಿ ವರ್ಷದಂತೆ ಈ ವರ್ಷ “ಸ್ವಚ್ಛೋತ್ಸವ” ಎಂಬ ಧ್ಯೇಯವಾಕ್ಯದೊಂದಿಗೆ, ಸ್ವಚ್ಛತೆ ಸೇವೆ ಪಾಕ್ಷಿಕ ಅಭಿಯಾನ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಲವೀಶ್ ತಿಳಿಸಿದ್ದಾರೆ.
ಸೆ.17 ರಿಂದ ಅ.2 ರವರೆಗೆ ಪ್ರತಿಯೊಬ್ಬರಿಗೂ ಸ್ವಚ್ಛತೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ವೈಯಕ್ತಿಕ ಸ್ವಚ್ಛತೆ, ಗ್ರಾಮದ ಸ್ವಚ್ಛತೆಗೆ, ತ್ಯಾಜ್ಯ ನಿರ್ವಹಣೆ, ಜಲಮೂಲಗಳ ಸುತ್ತ ಸ್ವಚ್ಛತೆ ಕಾಯ್ದುಕೊಳ್ಳಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದರು.ತಾಲೂಕು ಪಂಚಾಯಿತಿಯ ಕಚೇರಿ, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ ಮುಂತಾದ ಸರಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸಾರ್ವಜನಿಕ ಸ್ಥಳ, ಕಸದಿಂದ ಕೂಡಿರುವ ಸ್ಥಳವನ್ನು ಸ್ವಚ್ಛತೆಗೊಳಿಸಿ ಅಲ್ಲಲ್ಲಿ ಕಸ ಎಸೆಯದಂತೆ ರಂಗೋಲಿ ಹಾಕಿ ಸುಂದರ ಸ್ಥಳವನ್ನಾಗಿ ಬದಲಾಯಿಸಬೇಕೆಂದರು.
ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ನೀಡಲಾಗುವುದು, ಈ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ವಿವಿಧ ಇಲಾಖೆಯ ಅಧಿಕಾರಿ/ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಯುವಕರು, ಸಂಜೀವಿನಿ ಯೋಜನೆಯ ಸಿಬ್ಬಂದಿ, ಸ್ವಸಹಾಯ ಸಂಘದ ಸದಸ್ಯರು, ನರೇಗಾ ಕೂಲಿ ಕಾರ್ಮಿಕರು, ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಸ್ವಚ್ಚತೆಯೇ ಸೇವೆ ಪಾಕ್ಷಕಿ ಆಂದೋಲನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.