ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಸರ್ಕಾರದ ನೂರಾರು ಯೋಜನೆಗಳು, ಕೋಟ್ಯಂತರ ರುಪಾಯಿ ಅನುದಾನಗಳು ಕಾಗದದ ಮೇಲಷ್ಟೇ ಉಳಿದಿವೆಯೇ? ಹೀಗೊಂದು ಗಂಭೀರ ಪ್ರಶ್ನೆ ಮೂಡಿಸುತ್ತಿದೆ ಜಿಲ್ಲೆಯ ಗಡಿ ತಾಲೂಕಾದ ಚಿಕ್ಕನಾಯಕನಹಳ್ಳಿಯ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿ ನಿಲಯದ ಇಂದಿನ ದುಸ್ಥಿತಿ.ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತಾಂಡವವಾಡುತ್ತಿದ್ದು, ವಿದ್ಯಾರ್ಥಿಗಳು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಪೌಷ್ಟಿಕಾಂಶವೇ ಇಲ್ಲದಂತಾಗಿದೆ. ಇನ್ನು ವಸತಿ ಕೊಠಡಿಗಳ ಸ್ಥಿತಿಯಂತೂ ಹೇಳತೀರದು. ಸರಿಯಾದ ಬೆಳಕು, ಗಾಳಿಯ ವ್ಯವಸ್ಥೆಯಿಲ್ಲ. ಕೈಕೊಟ್ಟಿರುವ ಫ್ಯಾನ್‌ಗಳು, ಕಳಚಿಕೊಂಡಿರುವ ವಿದ್ಯುತ್ ಸ್ವಿಚ್ ಬಾಕ್ಸ್‌ಗಳು ಯಾವುದೇ ಕ್ಷಣದಲ್ಲಾದರೂ ಅಪಾಯವನ್ನು ಆಹ್ವಾನಿಸುವಂತಿವೆ. ಹಾಸ್ಟೆಲ್ ಸುತ್ತಮುತ್ತ ಬೆಳೆದಿರುವ ಹಸಿರು ತ್ಯಾಜ್ಯ ಮತ್ತು ಕಸದ ರಾಶಿಯಿಂದಾಗಿ ಹಲವು ಬಾರಿ ಹಾವುಗಳು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ವಾಸಿಸುವಂತಾಗಿದೆ.ಶೌಚಾಲಯಗಳಲ್ಲಿನ ಅಸ್ವಚ್ಛತೆ, ಬಿಸಿ ನೀರಿನ ಕೊರತೆ ಮತ್ತು ನೀರಿನ ಟ್ಯಾಂಕ್‌ನ್ನು ವರ್ಷಗಳಿಂದ ಸ್ವಚ್ಛಗೊಳಿಸದ ಕಾರಣ ವಿದ್ಯಾರ್ಥಿಗಳಲ್ಲಿ ಚರ್ಮರೋಗ ಹಾಗೂ ಅಲರ್ಜಿ ಕಾಣಿಸಿಕೊಳ್ಳುತ್ತಿದೆ. ಇದರೊಂದಿಗೆ ವಿದ್ಯಾರ್ಥಿಗಳು ಬಳಸುವ ಹಾಸಿಗೆಗಳು ಧೂಳು ಹಿಡಿದು ಶ್ವಾಸಕೋಶ ಸಂಬಂಧಿತ ಕಾಯಿಲೆಯಗಳು ಎದುರಾಗಿವೆ. ಹಾಸ್ಟೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿವೆ, ಕಾವಲು ಕಾಯಲು ವಾಚ್‌ಮನ್ ಸಹ ಇಲ್ಲ. ಹೀಗಾಗಿ ವಿದ್ಯಾರ್ಥಿಗಳ ಸುರಕ್ಷತೆಗೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತಿದೆ.
ಅಧಿಕಾರಿಗಳೇ ಗಮನಹರಿಸಿ
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿದ್ಯಾರ್ಥಿ ನಿಲಯಗಳು ಅಭಿವೃದ್ಧಿಯ ಕೇಂದ್ರಗಳಾಗಬೇಕೇ ಹೊರತು, ಅವ್ಯವಸ್ಥೆಯ ಸಂಕೇತಗಳಾಗಬಾರದು. ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ, ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಆರೋಗ್ಯಕರ ವಾತಾವರಣ ಕಲ್ಪಿಸಿಕೊಡಬೇಕಿದೆ.
ಎಬಿವಿಪಿಯಿಂದ ಹೋರಾಟದ ಎಚ್ಚರಿಕೆಸರ್ಕಾರದಿಂದ ವಿದ್ಯಾರ್ಥಿ ನಿಲಯಗಳಿಗೆ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ, ಚಿಕ್ಕನಾಯಕನಹಳ್ಳಿ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ಅದರ ಕಿಂಚಿತ್ತೂ ಪ್ರಯೋಜನ ಸಿಗುತ್ತಿಲ್ಲ. ಇಲ್ಲಿನ ನಿಲಯಪಾಲಕರು ಹಾಗೂ ಅಡುಗೆ ಸಿಬ್ಬಂದಿಯ ಬೇಜವಾಬ್ದಾರಿತನವೇ ಇಷ್ಟೆಲ್ಲಾ ಅವ್ಯವಸ್ಥೆಗೆ ನೇರ ಕಾರಣ. ತಕ್ಷಣವೇ ಇವರನ್ನು ವರ್ಗಾವಣೆ ಮಾಡಬೇಕು. ಇನ್ನು 15 ದಿನಗಳ ಒಳಗಾಗಿ ಹಾಸ್ಟೆಲ್‌ನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸದಿದ್ದರೆ, ಎಬಿವಿಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಬಿವಿಪಿ ಎಚ್ಚರಿಸಿದೆ