ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಹಾನಗಲ್ಲ ಪುರಸಭೆಗೆ ಪಟ್ಟಣದ ಸ್ವಚ್ಛತೆಯೇ ಸವಾಲು, ಅರ್ಧದಷ್ಟೂ ಇಲ್ಲದ ಪೌರ ಕಾರ್ಮಿಕರು, ನೂರು ಕಿಮೀ ಚರಂಡಿ ಸ್ವಚ್ಛಗೊಳಿಸಬೇಕು. ಈ ಮಧ್ಯೆ ಮನೆ ಮನೆಗೆ ತೆರಳಿ ಕಸ ವಿಂಗಡಣೆ ಜಾಗೃತಿ ಮೂಡಿಸುವ ಹೊಣೆ!

ಹಾನಗಲ್ಲ ಪುರಸಭೆ ವ್ಯಾಪ್ತಿಯ ೨೩ ವಾರ್ಡ್‌ಗಳಲ್ಲಿ ೮೦೦ ಮನೆಗಳಿವೆ. ೩೫ ಸಾವಿರ ಜನಸಂಖ್ಯೆ ಹಾಗೂ ತಾಲೂಕು ಆಡಳಿತ ಕೇಂದ್ರವೂ ಆಗಿದ್ದರಿಂದ ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿ, ಬ್ಯಾಂಕು ಸೇರಿದಂತೆ ವಿವಿಧ ವಾಣಿಜ್ಯ ವಹಿವಾಟಿನಿಂದ ಜನ ಸಂದಣಿಯನ್ನುಳ್ಳ ಪುರಸಭೆ ಇದಾಗಿದೆ. ಪುರಸಭೆ ಸ್ವಚ್ಛತೆಗೆ ೯೦ರಷ್ಟು ಪೌರ ಕಾರ್ಮಿಕ ಸಿಬ್ಬಂದಿ ಬೇಕು. ಇರುವುದು ಕೇವಲ ೪೦ ಮಾತ್ರ, ಅದರಲ್ಲೂ ೧೦ ಗುತ್ತಿಗೆ ಆಧಾರದ ಸಿಬ್ಬಂದಿ. ಎ ಬಿ ಸಿ ಎಂದು ಮೂರು ವಲಯ ಮಾಡಿಕೊಂಡು ಸಾರ್ವಜನಿಕ ದಟ್ಟಣೆ ಇರುವ, ಸರ್ಕಾರಿ ಕಚೇರಿ, ಬಸ್ ನಿಲ್ದಾಣ ಭಾಗವನ್ನು ಎ ವಲಯವಾಗಿ ನಿತ್ಯ ಸ್ವಚ್ಛತೆಗೆ ಒಳಪಡಿಸಿದರೆ, ಬಿ ಹಾಗೂ ಸಿ ವಲಯವನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು ಕಷ್ಟಕರವಾಗಿದೆ.

ಮನೆ ಮನೆ ಕಸ ತುಂಬುವ ವಾಹನಗಳು ೬ ಇವೆ, ಇನ್ನೂ ೬ ವಾಹನ ಬೇಕು. ಟ್ರ್ಯಾಕ್ಟರ್, ಜೆಸಿಬಿ ಟಿಪ್ಪರ್ ಇವೆ. ಸದ್ಯದಲ್ಲೇ ಇನ್ನೂ ಎರಡು ಟ್ರ್ಯಾಕ್ಟರ್ ಬರುವ ನಿರೀಕ್ಷೆಯೂ ಇದೆ. ನಿತ್ಯ ೧೦ ಟನ್ ಕಸ ವಿಲೇವಾರಿಯಾಗುತ್ತದೆ. ಪಟ್ಟಣದಿಂದ ೧೦ ಕಿಮೀ ದೂರದ ಕಸ ವಿಲೇವಾರಿ ಘಟಕಕ್ಕೆ ಇದನ್ನು ತಲುಪಿಸಲು ಸಿಬ್ಬಂದಿ ಕೊರತೆ ತೀವ್ರವಾಗಿದೆ.


ಪಟ್ಟಣದ ಸಾರ್ವಜನಿಕರು ಕಸವನ್ನು ಹಸಿ ಕಸ, ಒಣ, ಸ್ಯಾನಿಟರಿ, ಔಷಧಿ ಸೇರಿದಂತೆ ವಿಶೇಷ ಕಾಳಜಿಯ ಕಸವನ್ನು ವಿಭಜಿಸಿ ಪುರಸಭೆ ಕಸ ವಿಲೇವಾರಿ ವಾಹನಕ್ಕೆ ಹಾಕಿದರೆ ಸಹಕಾರಿ. ಕಸ ವಿಲೇವಾರಿ ಘಟಕದಲ್ಲಿ ಕಾಂಪೋಸ್ಟ ಘಟಕವೂ ಇದ್ದು, ಇದರಿಂದ ಒಂದು ವರ್ಷಕ್ಕೆ ಕನಿಷ್ಠ ₹೨೦ ಸಾವಿರ ಆದಾಯವಿದೆ. ಒಂದು ಕೆಜಿ ಕಾಂಪೋಸ್ಟ ಗೊಬ್ಬರವನ್ನು ₹೫ಕ್ಕೆ ಮಾರಲಾಗುತ್ತದೆ. ಇದಕ್ಕೆ ರೈತರಿಂದ ಬಹು ಬೇಡಿಕೆಯೂ ಇದೆ. ಅಲ್ಲದೆ ಇಲ್ಲಿನ ಖಾಲಿ ಬಾಟಲಿ, ಪ್ಲಾಸ್ಟಿಕ್, ರಟ್ಟು, ಕಬ್ಬಿಣದಂತಹ ವಸ್ತುಗಳ ಮಾರಾಟದಿಂದ ವರ್ಷಕ್ಕೆ ಅಂದಾಜು ₹೨ ಲಕ್ಷ ಆದಾಯವಿದೆ. ಕಸವನ್ನು ವಿಂಗಡಿಸಿ ಕೊಡಿ ಎಂದು ಪುರಸಭೆಯವರು ಕೋರುತ್ತಿದ್ದಾರೆ. ಸ್ವತಃ ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ ಪುರಸಭೆ ಪೌರ ಕಾರ್ಮಿಕರೊಂದಿಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಖಾಲಿ ನಿವೇಶನ: ಇಲ್ಲಿನ ಖಾಲಿ ನಿವೇಶಗಳು ಕಸದ ತೊಟ್ಟಿಗಳಾಗುತ್ತಿವೆ. ಸಾರ್ವಜನಿಕರು ಇಲ್ಲಿಯೇ ಕಸ ಹಾಕುತ್ತಾರೆ. ಸ್ವಲ್ಪ ಪಟ್ಟಣದ ಅಂಚಿನ ಖಾಲಿ ನಿವೇಶನಗಳು ವಿವಿಧ ಬಾಟಲಿಗಳು, ದೊಡ್ಡ ಪ್ರಮಾಣದ ಕಸದಿಂದ ತುಂಬಿರುತ್ತವೆ. ಅಲ್ಲೆಲ್ಲ ಹುಲ್ಲು ಬೆಳೆದು ಹಂದಿಗಳ ತಾಣವಾಗುತ್ತಿವೆ. ಇಲ್ಲಿನ ದುರ್ವಾಸನೆ ಅಕ್ಕಪಕ್ಕದ ಮನೆಗಳವರು ತಾಳಲಾರದಂತಿದೆ. ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ.ಜಗದೀಶ ಹೇಳುವಂತೆ ಇಂತಹ ಖಾಲಿ ನಿವೇಶನಗಳ ಮಾಲೀಕರಿಗೆ ನೊಟೀಸ್ ನೀಡಲಾಗಿದೆ. ಸ್ಪಂದಿಸದಿದ್ದರೆ ದಂಡ ಹಾಗೂ ಸ್ವಚ್ಛತಾ ವೆಚ್ಚ ವಸೂಲಿ ಮಾಡಿ ಪುರಸಭೆಯಿಂದಲೇ ಸ್ವಚ್ಛ ಮಾಡುತ್ತೇವೆ ಎಂದು ಹೇಳುತ್ತಾರೆ.

ಹಾನಗಲ್ಲ ಪುರಸಭೆಯ ಸ್ವಚ್ಛತೆಗಾಗಿ ಸೌಂದರ್ಯಕ್ಕಾಗಿ ನಿರೀಕ್ಷೆಗಳು ಬಹಳ. ಆದರೆ ಅನುದಾನದ ಲಭ್ಯತೆಯೂ ಇಲ್ಲಿ ಪ್ರಶ್ನೆಯಾಗಿದೆ. ಒಳ ಚರಂಡಿ ವ್ಯವಸ್ಥೆ ಆಗಬೇಕೆಂಬ ನಿರೀಕ್ಷೆ ಇದೆ. ಕೋಟಿ ಕೋಟಿ ಇದಕ್ಕೆ ಬೇಕು ಎನ್ನಲಾಗಿದೆಯಾದರೂ ಇನ್ನೂ ಈ ಬಗ್ಗೆ ಯಾವುದೇ ಯೋಜನೆ ಯೋಚನೆ ಕಂಡು ಬರುತ್ತಿಲ್ಲ.

ಪುರಸಭೆಯ ಆದಾಯದಲ್ಲಿ ಮೊದಲ ಆದ್ಯತೆ ಸ್ವಚ್ಛತೆಗೆ ನೀಡಲಾಗುತ್ತಿದೆ. ಕಸ ವಿಂಗಡಿಸಿ ವಿಲೇವಾರಿಗೆ ಸಾರ್ವಜನಿಕರು ಸಹಕರಿಸಿದರೆ ವೈಜ್ಞಾನಿಕವಾಗಿ ತ್ಯಾಜ್ಯ ಬಳಸಲು ಕಳಿಸಲು ಸಾಧ್ಯ. ಇದು ಸ್ವಯಂಪ್ರೇರಿತವಾಗಿ ಆಗಬೇಕು. ನಾವು ಕೂಡ ಜಾಗೃತಿ ಮೂಡಿಸುತ್ತಿದ್ದೇವೆ. ಸಿಬ್ಬಂದಿ ಕೊರತೆ ನೀಗುವ ಭರವಸೆ ಇದೆ. ಸಿಬ್ಬಂದಿ ಸ್ವಚ್ಛತೆಗೆ ಹರ ಸಾಹಸ ಮಾಡುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ ಹೇಳಿದರು.