ನದಿಗಳ ಸ್ವಚ್ಛತೆ ಎಲ್ಲ ಸೇವೆಗಿಂತ ಮಿಗಿಲು

| Published : Aug 12 2024, 12:45 AM IST

ಸಾರಾಂಶ

ದೇಶವೇ ನಮ್ಮ ಧರ್ಮವಾಗಲಿ, ದೇಶದಲ್ಲಿ ಹರಿಯುವ ನದಿಗಳೇ ದೇವತೆಗಳು. ಅವುಗಳನ್ನು ಕಾಪಾಡುವುದು ದೇಶದ ಹಾಗೂ ಧರ್ಮದ ಕಾರ್ಯ ಮಾಡಿದಂತೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನ ರಾಜ್ಯ ಪ್ರವರ್ತಕ ಸಂದೀಪ್‌ ಗುರೂಜಿ ಹರಿಹರದಲ್ಲಿ ಹೇಳಿದ್ದಾರೆ.

- ನಿರ್ಮಲ ತುಂಗಭದ್ರಾ ಅಭಿಯಾನ ಕಾರ್ಯಕ್ಷಮದಲ್ಲಿ ಸಂದೀಪ್‌ ಗುರೂಜಿ- - - ಕನ್ನಡಪ್ರಭ ವಾರ್ತೆ ಹರಿಹರ

ದೇಶವೇ ನಮ್ಮ ಧರ್ಮವಾಗಲಿ, ದೇಶದಲ್ಲಿ ಹರಿಯುವ ನದಿಗಳೇ ದೇವತೆಗಳು. ಅವುಗಳನ್ನು ಕಾಪಾಡುವುದು ದೇಶದ ಹಾಗೂ ಧರ್ಮದ ಕಾರ್ಯ ಮಾಡಿದಂತೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನ ರಾಜ್ಯ ಪ್ರವರ್ತಕ ಸಂದೀಪ್‌ ಗುರೂಜಿ ಹೇಳಿದರು.

ನಗರದ ಕಾಳಿದಾಸ ನಗರದ ಐಟಿಐ ಕಾಲೇಜಿನ ಸಭಾಂಗದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಕಾರ್ಯಕ್ಷಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನದಿಗಳ ಸ್ವಚ್ಛತೆ ಮಾಡುವುದು ಆಧ್ಯಾತ್ಮಿಕ, ಪಾರಮಾರ್ಥಕ ಕೆಲಸ ಮಾಡಿದ್ದಕಿಂತಲೂ ಅತ್ಯಂತ ಉನ್ನತವಾದದ್ದು ಎಂದರು.

"ಗಂಗಾಸ್ನಾನ ತುಂಗಾಪಾನ " ಎಂಬ ಮಾತಿನಂತೆ ಹಿಂದಿನ ಕಾಲದಲ್ಲಿ ಜನರು ಕನಿಷ್ಠ 90 ವರ್ಷ ಬದುಕುತ್ತಿದ್ದರು. ಆದರೆ, ಈಗ 45ಕ್ಕೆ ಅನಾರೋಗ್ಯದಿಂದ ಮೃತಪಡುತ್ತಿದ್ದಾರೆ. ಅದಕ್ಕೆ ಕಾರಣ ಹಿಂದಿನ ದಿನಗಳಲ್ಲಿ ಜನರು ಪಂಚಭೂತಗಳಾದ ನೀರು, ಗಾಳಿ, ಭೂಮಿ, ಆಕಾಶ ಅಗ್ನಿಗಳ ಪಾವಿತ್ರ್ಯತೆ ಅರಿತಿದ್ದು ಅವುಗಳನ್ನು ಗೌರವಿಸುತ್ತಿದ್ದರು ಎಂದರು.

ಪಾದಯಾತ್ರೆಯಲ್ಲಿ ಜನರಿಗೆ ಅರಿವು ಜಾಗ್ರತೆ ಮೂಡಿಸುವ ಮೂಲಕ ನದಿ ನೀರನ್ನು ಸ್ವಚ್ಛವಾಗಿಡುವ ಹಾಗೂ ಸರ್ಕಾರದ ಗಮನ ಸೆಳೆದು ನೀರನ್ನು ಸ್ವಚ್ಚಮಾಡುವ ಕಾರ್ಯಕ್ಕೆ ಮುಂದಾಗುವಂತೆ ಮಾಡುವುದೇ ಮೂಲ ಆಶಯವಾಗಿದೆ. ವಿದ್ಯಾರ್ಥಿಗಳು ಸಂಘಟಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು.

ಹರ ಮಠದ ಧರ್ಮದರ್ಶಿ ಚಂದ್ರಶೇಖರ್‌ ಮಾತನಾಡಿ, ಇದೊಂದು ಅದ್ಭುತ ಯೋಜನೆ ಆಗಿದೆ. ಈ ಹಿಂದೆ ಹರಿಹರದಲ್ಲಿ ವರದಿಗಾರ ದಿ. ರಾಘವೇಂದ್ರ ನೇತೃತ್ವದಲ್ಲಿ "ನನ್ನ ಊರು ನನ್ನ ಹೊಣೆ " ಎಂಬ ಸಂಘಟನೆ ಪ್ರತಿ "ವಾರ ನದಿ ಪಾತ್ರವನ್ನು ಸ್ವಚ್ಛಮಾಡುವ ಕಾರ್ಯ ಮಾಡುತ್ತಿದ್ದರು. ಸಧ್ಯಕ್ಕೆ ಅದು ಸ್ಥಗಿತಗೊಂಡಿದೆ. ಅದೇ ಮಾದರಿಯಲ್ಲಿ ಮತ್ತೆ ಸಂಘಟನೆ ಕಟ್ಟುವ ಕಾರ್ಯ ಅಗಬೇಕಿದೆ. ಪಾದಯಾತ್ರೆ ಬರುವ ಎಲ್ಲರಿಗೂ ಸಕಲ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಮಿಕ ಮುಖಂಡ ಎಚ್‌.ಕೆ. ಕೊಟ್ರಪ್ಪ, ಎಬಿವಿಪಿ ಮುಖಂಡ ವೀರೇಶ್ ಶಾಂತಕುಮಾರಿ, ಕವಿತಾ ಸೇರಿದಂತೆ ಇತರರು ಸಲಹೆ ನೀಡಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಬಸವರಾಜ್‌ ಹಾಗೂ ನಾಗರಾಜ್‌ ಕುಲಕರ್ಣಿ ಇತರರು ಉಪಸ್ಥಿತರಿದ್ದರು.‌

- - -

ಬಾಕ್ಸ್‌ * ಪರಿಸರ ರಕ್ಷಣೆ ಕಾಳಜಿ ಮುಖ್ಯ: ಪ್ರೊ. ಬಿಎಂಕೆಹಿಂದೂ ರಾಷ್ಟ್ರಸೇನೆಯ ಪ್ರೊ. ಡಿ.ಎಂ. ಕುಮಾರಸ್ವಾಮಿ ಮಾತನಾಡಿ, ಕರ್ನಾಟಕದ ಪ್ರಮುಖ ನದಿಗಳಲ್ಲಿ ತುಂಗಭದ್ರಾ ನದಿ ಅತಿ ದೊಡ್ಡದು. ಶೃಂಗೇರಿಯ ಬಳಿ ಹುಟ್ಟುವ ತುಂಗಾನದಿ ಅಲ್ಲಿನ ಗುಡ್ಡಗಳಲ್ಲಿನ ಮರ-ಗಿಡಗಳ ಬೇರುಗಳನ್ನು ಸೋಕಿ ಔಷಧಿಯ ಗುಣ ಹೊಂದಿರುತ್ತದೆ. ಆದರೆ, ಹೊಳೆಹೊನ್ನೂರು ಬಳಿ ಕೂಡ್ಲಿಯಲ್ಲಿ ಭದ್ರಾನದಿ ತುಂಗೆಯನ್ನು ಸೇರಿ ಪವಿತ್ರ ನದಿಯಾಗಿ ಹೊರಹೊಮ್ಮುತ್ತದೆ. ಇದನ್ನು ನಾವು ಕೊಳಕು ಮಾಡಿ ಮುಂದೆ ಬಿಡುತ್ತೇವೆ ಎಂದು ವಿಷಾದಿಸಿದರು.

ತುಂಗೆಯ ಉಗಮ ಸ್ಥಾನವಾದ ಶೃಂಗೇರಿಗೆ ಪ್ರತಿವರ್ಷ 1 ಕೋಟಿ ಜನ ಆಗಮಿಸುತ್ತಾರೆ. ಅನೇಕರು 2-3 ದಿನ ಇದ್ದು ಅಲ್ಲಿ ತಮ್ಮ ಬಟ್ಟೆ, ಸಾಬೂನು, ಮಲಮೂತ್ರ ಸೇರಿದಂತೆ ಇತರ ಮಲೀನ ವಸ್ತುಗಳನ್ನು ಸೇರಿಸುತ್ತಾರೆ. ಅನಂತರ ಬರುವ ತೀರ್ಥಹಳ್ಳಿ ಶಿವಮೊಗ್ಗ, ಹೊನ್ನಾಳಿ ಮುಂತಾದ ನಗರಗಳಲ್ಲಿ ಬಹುತೇಕ ಒಳಚರಂಡಿ ವ್ಯವಸ್ಥೆ ಇಲ್ಲ. ಇದ್ದರೂ ಬಹುತೇಕ ಕಾರ್ಯಾರಂಭ ಮಾಡಿಲ್ಲ. ತದನಂತರ ಬರುವ ನೀರನ್ನು ನೀವು ಬಳಸುತ್ತಿರಿ. ಹಾಗೆಯೇ ನಿಮ್ಮ ನಗರದ ಮಲೀನವನ್ನು ಸೇರಿಸಿ ಕೆಳ ಗ್ರಾಮ ಮತ್ತು ನಗರಗಳಿಗೆ ಕಳುಹಿಸುತ್ತೀರಿ ಎಂದು ಪರಿಸರ ಹಾನಿಯನ್ನು ಎಳೆಎಳೆಯಾಗಿ ವಿವರಿಸಿ, ನೀರಿನ ಮೂಲಗಳು ಮತ್ತು ಪರಿಸರ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

- - -

-11ಎಚ್‌ಆರ್‌ಆರ್‌1:

ಹರಿಹರದ ಕಾಳಿದಾಸ ನಗರದ ಐಟಿಐ ಕಾಲೇಜಿನ ಸಭಾಂಗದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಕಾರ್ಯಕ್ಷಮದ - ಸಾನಿಧ್ಯವನ್ನು ಸಂದೀಪ ಗುರೂಜಿ ಸಾನಿಧ್ಯ ವಹಿಸಿದ್ದರು. ಬಸವರಾಜ್‌ ಪಾಟೀಲ್‌, ಬಿ.ಎಂ ಕುಮಾರಸ್ವಾಮಿ, ನಾಗರಾಜ್‌ ಕುಲಕರ್ಣಿ, ಚಂದ್ರಶೇಖರ್‌ ಪೂಜಾರ್‌ ಭಾಗವಹಿಸಿದ್ದರು.