ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆಸ್ವಚ್ಛತಾ ಕಾರ್ಯಕ್ರಮ ಎಂಬುದು ಕೇವಲ ಒಂದು ದಿನಕ್ಕೆ ಮೀಸಲಾಗಿರಬಾರದು. ಇದು ನಿತ್ಯ ನಡೆಯುವ ಕಾರ್ಯವಾಗಬೇಕು. ನಮ್ಮ ಮನೆ, ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ, ಯಾವುದೇ ರೀತಿಯ ರೋಗಗಳು ಹರಡುವುದಿಲ್ಲ ಎಂದು ರೈಲ್ವೆ ಪೊಲೀಸ್ ಠಾಣೆಯ (ಆರ್‌ಪಿಎಫ್)ಸಬ್ ಇನ್ಸ್ಪೆಕ್ಟರ್ ಬಿ.ಎನ್. ಕುಬೇರಪ್ಪ ಹೇಳಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ರೈಲ್ವೆ ಪೊಲೀಸ್ ಇಲಾಖೆ, ಚಾಣಕ್ಯ ಪದವಿ ಪೂರ್ವ ಕಾಲೇಜು, ಹಾಗೂ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಸ್ವಭಾವ್ ಸ್ವಚ್ಛತಾ ಸಂಸ್ಕಾರ್ ಎಂಬ ಧ್ಯೆಯದೊಂದಿಗೆ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸ್ವಚ್ಛತೆ ಎಂಬುದು ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕು. ನಿಮ್ಮ ನಿತ್ಯದ ಕಾರ್ಯಗಳ ಜತೆಗೆ ಈ ಸ್ವಚ್ಛತಾ ಕಾರ್ಯವನ್ನು ರೂಢಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲ ಪ್ರದೇಶ, ರಸ್ತೆ, ಶಾಲೆ, ಕಾಲೇಜು, ಕಚೇರಿ ಸ್ವಚ್ಛವಾಗಿದ್ದರೆ ಉತ್ತಮ ಪರಿಸರವನ್ನು ಪಡೆಯಲು ಸಾಧ್ಯ. ನಿತ್ಯವೂ ನಿಮ್ಮ ಮನೆ ಸ್ವಚ್ಛತೆ ಜತೆಗೆ ಸಮೀಪದ ಶಾಲೆ ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು.ರೈಲ್ವೆ ಇಲಾಖೆಯ ಮುಖ್ಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ ಮಾತನಾಡಿ, ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ ಎಂದರೆ ನಮ್ಮ ಸ್ವಭಾವ ಯಾವ ರೀತಿ ಸ್ವಚ್ಛತೆ ಕಡೆಗೆ ಗಮನಹರಿಸುತ್ತದೆಯೋ ಅದೇ ರೀತಿ ನಮ್ಮ ಸಂಸ್ಕಾರ ಇರುತ್ತದೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದ್ದರಿಂದ ಯುವ ಜನತೆಗೆ ಶಾಲಾ ಕಾಲೇಜು ಮಟ್ಟದಲ್ಲಿಯೇ ಜಾಗೃತಿ ಮೂಡಿಸುವ ಸಲುವಾಗಿ ಈ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಕೊಂಡರೆಡ್ಡಿ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಿ ಆರ್.ಪಾಟೀಲ, ಚಾಣಕ್ಯ ಕಾಲೇಜಿನ ಪ್ರಾಚಾರ್ಯ ಬಿಆರ್‌ಟಿ ಸ್ವಾಮಿ, ಡಾನ್ ಬಾಸ್ಕೋ ಶಾಲೆಯ ಶ್ರೀನಿವಾಸ, ಇತರೆ ಅಧಿಕಾರಿಗಳು, ಉಪನ್ಯಾಸಕ ರವಿಕುಮಾರ, ವಿದ್ಯಾರ್ಥಿಗಳು, ಸಿಬ್ಬಂದಿ ಇತರರು ಇದ್ದರು.