ಸಾರಾಂಶ
ಕಳೆದ ಬಾರಿ ದಾವಣಗೆರೆಗೆ 12ನೇ ಸ್ಥಾನ: ಮೇಯರ್ ವಿನಾಯಕ, ಆಯುಕ್ತೆ ರೇಣುಕಾ । ರಾಷ್ಟ್ರಮಟ್ಟದಲ್ಲಿ 169ನೇ ಸ್ಥಾನಕ್ಕೇರಿ ಸಾಧನೆ
ಕನ್ನಡಪ್ರಭ ವಾರ್ತೆ ದಾವಣಗೆರೆಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ-2023ರಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಹಾನಗರ ರಾಜ್ಯದಲ್ಲೇ 6ನೇ ಸ್ಥಾನ, ರಾಷ್ಟ್ರಮಟ್ಟದಲ್ಲಿ 169ನೇ ಸ್ಥಾನಗಳಿಸಿ ಸಾಧನೆ ಮಾಡಿದೆ ಎಂದು ಪಾಲಿಕೆ ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಆಯುಕ್ತೆ ರೇಣುಕಾ ತಿಳಿಸಿದರು.
ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೇಶಾದ್ಯಂತ ಯಾವ್ಯಾವ ನಗರಗಳು ಹೆಚ್ಚು ಸ್ವಚ್ಛ ಎಂಬುದು ಸಮೀಕ್ಷೆ ವರದಿ ನಿರ್ಧರಿಸುತ್ತದೆ. ಕಳೆದ ಬಾರಿ 12ನೇ ಸ್ಥಾನದಲ್ಲಿದ್ದ ದಾವಣಗೆರೆ ಈಗ 6 ಸ್ಥಾನಕ್ಕೇರಿರುವುದು ನಾವೆಲ್ಲಾ ಹೆಮ್ಮೆಪಡುವ ಸಂಗತಿ. ರಾಷ್ಟ್ರಮಟ್ಟದಲ್ಲಿ ಹಿಂದಿನ ಬಾರಿ 220ನೇ ರ್‍ಯಾಂಕ್ ಪಡೆದಿದ್ದು, ಈ ಬಾರಿ 169ನೇ ಸ್ಥಾನಕ್ಕೇರಿ ಗಮನಾರ್ಹ ಸಾಧನೆ ಮಾಡಿದೆ ಎಂದರು.ಸಚಿವರು, ಶಾಸಕರು, ಮೇಯರ್, ಜಿಲ್ಲಾಧಿಕಾರಿ, ಮೇಯರ್, ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳು, ಸಾರ್ವಜನಿಕರ ಸಹಕಾರದಿಂದ ಮಹಾನಗರದ ಉತ್ತಮ ರ್‍ಯಾಂಕ್ ಪಡೆಯಲು ಸಾಧ್ಯವಾಗಿದೆ. ಇದೇ ಮೊದಲ ಬಾರಿಗೆ ಮಹಾನಗರಕ್ಕೆ ಸ್ಟಾರ್ ರೇಟಿಂಗ್ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಅಗ್ರಸ್ಥಾನ ಪಡೆಯಲು ದಾವಣಗೆರೆ ನಗರ ಸುಂದರ, ಸ್ವಚ್ಛ ನಗರವಾಗಿಸಲು ಮಹಾ ಜನತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಸ ಸಂಗ್ರಹಕ್ಕೆ ಹಂತ ಹಂತವಾಗಿ ಆಟೋಗಳ ಖರೀದಿ:ಮಹಾನಗರದಲ್ಲಿ ಪ್ರತಿನಿತ್ಯ 170 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಕಸ ಸಂಗ್ರಹಿಸುವ 92 ಆಟೋ ಪಾಲಿಕೆಯಲ್ಲಿವೆ. ನಗರದ ಜನಸಂಖ್ಯೆಗೆ ಅನುಗುಣವಾಗಿ 150 ಆಟೋಗಳ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಸ ಸಂಗ್ರಹಿಸಲು ಆಟೋಗಳನ್ನು ಹಂತ ಹಂತವಾಗಿ ಖರೀದಿಸಲಾಗುವುದು. ಸ್ವಚ್ಛತೆ ಕಾಪಾಡಲು ಪಾಲಿಕೆ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು. ನಿಮ್ಮ ಮನೆ ಸ್ವಚ್ಛವಾಗಿಡುವಂತೆ ನಿಮ್ಮ ಮನೆ ಅಂಗಳ, ಕೇರಿಯನ್ನೂ ಸ್ವಚ್ಛವಾಗಿಡಬೇಕು ಎಂದು ಕರೆ ನೀಡಿದರು.
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ್, ಎ.ನಾಗರಾಜ ಇತರರಿದ್ದರು..................
ಜನವರಿ ಅಂತ್ಯದೊಳಗೆ ನಾಮಫಲಕದಲ್ಲಿ ಶೇ.60 ಕನ್ನಡ ಬಳಕೆ ಕಡ್ಡಾಯಕನ್ನಡವಿಲ್ಲದ ಫಲಕಗಳಿದ್ದರೆ ಫೆ.1ರಿಂದ ದಂಡ, ಟ್ರೇಡ್ ಲೈಸೆನ್ಸ್ ರದ್ದು: ಆಯುಕ್ತೆ ಎಚ್ಚರಿಕೆ
ರಾಜ್ಯ ಸರ್ಕಾರದ ನಿರ್ದೇಶನದಂತೆ ಅಂಗಡಿ, ಹೋಟೆಲ್ ಸೇರಿ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ ಬಳಸಲೇಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ಹೇಳಿದರು.ಆಟೋಗಳು, ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆಗಳ ಮೂಲಕ ಈಗಾಗಲೇ ಅಂಗಡಿಗಳು, ಹೊಟೆಲ್, ಲಾಡ್ಜ್ ಸೇರಿ ವಾಣಿಜ್ಯ ಸಂಸ್ಥೆ, ಕಂಪನಿಗಳು, ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
ಜನವರಿ ಅಂತ್ಯದವರೆಗೆ ಶೇ.60 ಕನ್ನಡ ಭಾಷೆಯ ಫಲಕ ಅಳವಡಿಸಲು ಕಾಲಾವಕಾಶ ನೀಡಲಾಗಿದೆ. ಇದೇ ಮಾಸಾಂತ್ಯದ ಒಳಗಾಗಿ ನಾಮಫಲಕಗಳ ಶೇ.60-40 ಅನುಪಾತದಲ್ಲಿ ಬದಲಾಯಿಸದಿದ್ದರೆ, ಅಂತಹವರಿಗೆ ದಂಡ ವಿಧಿಸಲಾಗುವುದು. ಈಗಾಗಲೇ ಈ ನಿಯಮ ಪಾಲಿಸದವರಿಗೆ ನೋಟಿಸ್ ನೀಡಲಾಗಿದೆ. ಫೆ.1ರಿಂದಲೇ ದಂಡ ವಿಧಿಸಿ ವಾಣಿಜ್ಯ ಪರವಾನಗಿ (ಟ್ರೇಡ್ ಲೈಸೆನ್ಸ್) ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತೆ ರೇಣುಕಾ ಎಚ್ಚರಿಸಿದರು..................................
ಖಾಲಿ ನಿವೇಶನ ಸ್ವಚ್ಛವಾಗಿಡದ ಮಾಲೀಕರಿಗೆ ದಂಡ: ಆಯುಕ್ತೆಮಹಾನಗರದಲ್ಲಿ 1.61 ಲಕ್ಷ ಆಸ್ತಿ ಇದ್ದು, ಇದರಲ್ಲಿ 1.43 ಲಕ್ಷ ಆಸ್ತಿ ಆನ್ ಲೈನ್ ಆಗಿವೆ. ನಮೂನೆ 2(ಫಾರಂ-2)ನ್ನು ಆನ್ ಲೈನ್ ನಲ್ಲೇ ಆಸ್ತಿ ಮಾಲೀಕರು ಪಡೆಯಬಹುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.
ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಲು ಪಾಲಿಕೆಯಿಂದ ನಿರಂತರವಾಗಿ ಆಸ್ತಿ ಮಾಲೀಕರಿಗೆ ತಿಳಿಸುತ್ತಲೇ ಬರಲಾಗಿದೆ. ಮಹಾ ನಗರದಲ್ಲಿ ಸುಮಾರು 45 ಸಾವಿರ ಖಾಲಿ ನಿವೇಶನ ಇದ್ದು, ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಬೇಕಾದ್ದು ಮಾಲೀಕರ ಜವಾಬ್ದಾರಿ ಎಂದರು. ಇನ್ನು ಮುಂದೆ ವರ್ಷಕ್ಕೊಮ್ಮೆ ಖಾಲಿ ನಿವೇಶನಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕಡ್ಡಾಯ ಅವುಗಳ ಮಾಲೀಕರೇ ಮಾಡಿಸಬೇಕು. ಇನ್ನು ಮುಂದೆ ಸ್ವಚ್ಛತೆ ಕಾಪಾಡದ ನಿವೇಶನಗಳ ಮಾಲೀಕರಿಗೆ ಪಾಲಿಕೆಯಿಂದ ದಂಡ ವಿಧಿಸಲಾಗುವುದು ಎಂದು ಆಯುಕ್ತೆ ರೇಣುಕಾ ಎಚ್ಚರಿಸಿದರು.