ಹುಬ್ಬಳ್ಳಿ:

ಹಳೇ ಹುಬ್ಬಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಸಮತಾ ಸೇನೆಯಿಂದ ಗುರುವಾರ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಒತ್ತುವರಿ ಪ್ರಕರಣದ ಕುರಿತು ಚರ್ಚಿಸಲು ಪಾಲಿಕೆ ಆಯುಕ್ತರು ಸಂಘಟನೆಯ ಮುಖಂಡರನ್ನು ಆಹ್ವಾನಿಸಿದ್ದರು. ನಿಗದಿತ ಸಮಯಕ್ಕೆ ಕಚೇರಿಗೆ ಬಂದಿದ್ದೆವು. ಆದರೆ, ಆಯುಕ್ತರು ಬರಲೇ ಇಲ್ಲ. ಆಯುಕ್ತರ ಈ ನಡೆ ಖಂಡಿಸಿ ಅನಿವಾರ್ಯವಾಗಿ ಅವರ ಕಚೇರಿಯಲ್ಲಿ ಧರಣಿ ನಡೆಸಬೇಕಾಯಿತು ಎಂದು ಸಮತಾ ಸೇನೆಯ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಆರೋಪಿಸಿದರು.

ಈ ವೇಳೆ ಮಾತನಾಡಿದ ಅವರು, ಅಂಬೇಡ್ಕರ್ ಕ್ರೀಡಾಂಗಣದ 1.11 ಎಕರೆ ಒತ್ತುವರಿಯಾಗಿದ್ದು, ಅದನ್ನು 7 ದಿನದೊಳಗೆ ತೆರವುಗೊಳಿಸಿ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಪಾಲಿಕೆ ಆಯುಕ್ತರ ಕಚೇರಿಯಲ್ಲೇ ಉಗ್ರ ಹೋರಾಟ ಹಾಗೂ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕ್ರೀಡಾಂಗಣ ಒತ್ತುವರಿ ವಿಚಾರವಾಗಿ 2010ರಿಂದ ಸಮತಾ ಸೇನೆ, ಶ್ರೀಭುವನೇಶ್ವರಿ ಸೇವಾ ಸಂಘ ಹಾಗೂ ವಿವಿಧ ದಲಿತ ಸಂಘಟನೆಗಳ ಮಹಾಮಂಡಳ ನಿರಂತರ ಹೋರಾಟ ನಡೆಸುತ್ತಿವೆ. ಆದರೂ ಮಹಾನಗರ ಪಾಲಿಕೆ ಒತ್ತುವರಿ ತೆರವುಗೊಳಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಒತ್ತುವರಿ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ಪ್ರಕರಣ ಸಂಘಟನೆಗಳ ಪರವಾಗಿ ಬಂದಿದೆ. ನ್ಯಾಯಾಲಯದ ನಿರ್ದೇಶನಗಳಿದ್ದರೂ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಳ್ಳದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವಲ್ಲಿ ತೀವ್ರ ಆಸಕ್ತಿ ತೋರುವ ಪಾಲಿಕೆ, ಸಾರ್ವಜನಿಕ ಕ್ರೀಡಾಂಗಣದ ಒತ್ತುವರಿ ತೆರವಿಗೆ ಯಾಕೆ ಮುಂದಾಗುತ್ತಿಲ್ಲ?. ಈ ದ್ವಂದ್ವ ನೀತಿಯ ಹಿಂದೆ ಪ್ರಭಾವಿ ವ್ಯಕ್ತಿಗಳ ಒತ್ತಡವಿದೆಯೇ? " ಎಂದು ಪ್ರಶ್ನಿಸಿದ ಉಳ್ಳಿಕಾಶಿ, ಪಾಲಿಕೆ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಯುಕ್ತರು ಆಗಮಿಸಿ ಈ ಕುರಿತು ಸಮಸ್ಯೆ ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ವೇಳೆ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆಯುಕ್ತರೊಂದಿಗೆ ಕರೆ ಮಾಡಿ ಮಾತನಾಡಿದರು. ಜೂ. 20ರಂದು ಸಂಘಟನೆಗಳು ಹಾಗೂ ಸಂಬಂಧಿಸಿದವರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಈ ವೇಳೆ ರೇವಣಸಿದ್ದಪ್ಪ ಹೊಸಮನಿ, ಮಂಜುನಾಥ ಉಳ್ಳಿಕಾಶಿ, ಮಹೇಶ ತೆರದಾಳ, ಇಮ್ತಿಯಾಜ್ ಬಿಜಾಪುರ, ಪ್ರಶಾಂತ ವಾಲಿ, ಹನುಮಂತ ಮೂಲಿಮನಿ ಸೇರಿದಂತೆ ಹಲವರಿದ್ದರು.