ಕನ್ನಡಪ್ರಭ ವಾರ್ತೆ ಮೈಸೂರು

ಇತ್ತೀಚೆಗೆ ದಟ್ಟಗಳ್ಳಿಯ ಬಳಿ ರೆಸ್ಟೋರೆಂಟ್ ನಲ್ಲಿ ನಡೆದ ಅಗ್ನಿ ದುರಂತವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲೆಯಲ್ಲಿ ಎರಡು ಅಥವಾ ಮೂರನೇ ಅಂತಸ್ತಿನಲ್ಲಿ ತಾತ್ಕಾಲಿಕವಾಗಿ ಕಟ್ಟಡವನ್ನು ನಿರ್ಮಿಸಿಕೊಂಡು ಅಗ್ನಿ ಸುರಕ್ಷತೆ ಕ್ರಮ ಕೈಗೊಳ್ಳದೇ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಗ್ನಿ ದುರಂತಗಳು ಹೇಳಿ ಬರುವುದಿಲ್ಲ. ರೂಫ್ ಟಾಪ್ ಪಬ್, ರೆಸ್ಟೋರೆಂಟ್ ಗಳಲ್ಲಿ ಹುಲ್ಲು, ಅಲಂಕಾರಿಕ ವಿದ್ಯುತ್ ದೀಪ ಬಳಸುವುದು ಹಾಗೂ ಯಾವುದೇ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಮೈಸೂರು ಮಹಾ ನಗರ ಪಾಲಿಕೆ ವಲಯ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಯ ಒಂದು ವಾರದೊಳಗೆ ಪರಿಶೀಲನೆ ನಡೆಸಿ ಟ್ರೇಡ್ ಲೈಸೆನ್ಸ್ ರದ್ದು ಪಡಿಸಲು ಕ್ರಮ ವಹಿಸಬೇಕು ಎಂದರು.

ಅಬಕಾರಿ ಇಲಾಖೆಯಿಂದ ಸಿಎಲ್-7, ಸಿಎಲ್-2, ಸಿಎಲ್-5 ಯಾವುದೇ ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುವುದು ಪರವಾನಗಿ ಪಡೆದ ರೀತಿ ಕಾರ್ಯ ನಿರ್ವಹಿಸದೇ ಇರುವ ಬಾರ್, ಪಬ್ ಗಳು ನಗರ ಹಾಗೂ ಹೊರ ವಲಯಗಳಲ್ಲಿವೆ, ಅಬಕಾರಿ ಇಲಾಖೆಯವರು ನಿರಂತರವಾಗಿ ತಪಾಸಣೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಲೋಪ ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಅಬಕಾರಿ ಇಲಾಖೆಯ ನಿಯಮದ ಪ್ರಕಾರ ಪರವಾನಗಿ ಪಡೆಯದೇ ಬಾರ್ ಅಂಡ್ ರೆಸ್ಟೋರೆಂಟ್ ಗಳು ಆನ್ ಲೈನ್ ನಲ್ಲೇ ಮದ್ಯ ಮಾರಾಟ ಕುರಿತು ಜಾಹೀರಾತು ನೀಡುವುದು ಹಾಗೂ ಜಾಹೀರಾತು ಫಲಕಗಳಲ್ಲಿ ಪ್ರಚಾರ ನೀಡುತ್ತಿರುವುದು ಕಂಡು ಬಂದಿದ್ದು, ಅಧಿಕಾರಿಗಳು ಕೂಡಲೇ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.


ಪಾಲಿಕೆ ಅಧಿಕಾರಿಗಳು, ಅಬಕಾರಿ ಅಧಿಕಾರಿಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ಅಗ್ನಿ ಸುರಕ್ಷತೆ ಕುರಿತು ವಹಿಸಬೇಕಾದ ಕ್ರಮಗಳ ಬಗ್ಗೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಒಂದು ದಿನದ ತರಬೇತಿ ನೀಡಲಿದ್ದಾರೆ. ಅಗ್ನಿ ಸುರಕ್ಷತಾ ಕ್ರಮಗಳು ಇಲ್ಲದಿದ್ದಲ್ಲಿ ಪರವಾನಗಾಗಿ ಅರ್ಜಿ ಬಂದ ಸಂದರ್ಭದಲ್ಲೇ ರದ್ದು ಮಾಡಿ ಎಂದು ಅವರು ಹೇಳಿದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಅಗ್ನಿಶಾಮಕ ಅಧಿಕಾರಿ ಗುರುರಾಜ್, ಡಿಸಿಪಿ ಕೆ.ಎಸ್. ಸುಂದರ್ ರಾಜ್ ಮೊದಲಾದವರು ಇದ್ದರು.

ಅಬಕಾರಿ ಹಾಗೂ ನಗರ ಪಾಲಿಕೆ ಅಧಿಕಾರಿಗಳು ರೇಡ್ ಮಾಡುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು.

- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ, ಮೈಸೂರುಹೋಂ ಸ್ಟೇ, ಹೊರ ವರ್ತುಲ ರಸ್ತೆಗಳಲ್ಲಿರುವ ರೆಸ್ಟೋರೆಂಟ್ ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟದ ಸಾಧ್ಯತೆ ಇರುತ್ತದೆ. ಅಬಕಾರಿ ಇಲಾಖೆಯವರು ಪರಿಶೀಲನೆ ನಡೆಸಬೇಕು.

- ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ, ಮೈಸೂರು ಜಿಲ್ಲೆ