ಕೊಪ್ಪಳ: ನಗರದ ಹುಲಿಕೆರೆಯ ಬಲಭಾಗದಲ್ಲಿ ಕೆರೆಯ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಲಾಗಿರುವ ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳಗೆ ಮನವಿ ಸಲ್ಲಿಸಿದರು.
ಹುಲಿಕೆರೆಯ ಮೂಲಪ್ರದೇಶ ಹಾಗೂ ಅದರ ಸುತ್ತಮುತ್ತಲ ಬಫರ್ ಜೋನ್ ಪ್ರದೇಶವನ್ನು ಕೆಲವರು ಅತಿಕ್ರಮಣ ಮಾಡಿಡುವುದು ಕಂಡುಬರುತ್ತಿದೆ. ಕೆರೆಯ ಕೆಲವು ಭಾಗಗಳಲ್ಲಿ ಭೂಸ್ವರೂಪ ಬದಲಾವಣೆ ಮಾಡಿ ವೈಯಕ್ತಿಕ ಉಪಯೋಗಕ್ಕೆ ಬಳಸಲಾಗುತ್ತಿದೆ ಎಂಬ ಮಾಹಿತಿ ಇದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಮತ್ತು ಪರಿಸರ ಸಂರಕ್ಷಣೆ ಹಿನ್ನೆಲೆ ಹುಲಿಕೆರೆ ಪ್ರದೇಶ ಸಂಪೂರ್ಣವಾಗಿ ಸರ್ವೇ ಮಾಡಬೇಕು. ಅಲ್ಲದೆ ಗಡಿಗುರುತಿಸುವ ಕಾರ್ಯ ಮಾಡಬೇಕು.ಕೆರೆ ಜಾಗ ಅತಿಕ್ರಮಣ ಕುರಿತು ವರದಿ ಸಿದ್ಧಪಡಿಸಿ ಕೆರೆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತಕ್ಷಣ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಈಗಾಗಲೇ ನಿರ್ಮಾಣ ಮಾಡಲಾಗುತ್ತಿರುವ ಸುಮಾರು ೭೦೦-೮೦೦ಮೀಟರ್ ಉದ್ದದ ಆ ರಸ್ತೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್,ವಿಪ ಸದಸ್ಯೆ ಹೇಮಲತಾ ನಾಯಕ, ಮುಖಂಡ ಡಾ.ಬಸವರಾಜ ಕ್ಯಾವಟರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್, ವೀರೇಶ ಸಜ್ಜನ್, ಗಣೇಶ ಹೊರತಟ್ನಾಳ್ ಇತರರಿದ್ದರು.