ಅನಧಿಕೃತ ರೆಸಾರ್ಟ್‌, ಹೋಂ ಸ್ಟೇ ತೆರವುಗೊಳಿಸಿ: ತಹಸೀಲ್ದಾರ್‌

| Published : Mar 19 2025, 12:36 AM IST

ಅನಧಿಕೃತ ರೆಸಾರ್ಟ್‌, ಹೋಂ ಸ್ಟೇ ತೆರವುಗೊಳಿಸಿ: ತಹಸೀಲ್ದಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಸುರಕ್ಷತೆ, ಪ್ರವಾಸಿಗರ ರಕ್ಷಣೆ, ಕಾನೂನು ಸುವ್ಯವಸ್ಥೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಡ ರಚಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

ಕೊಪ್ಪಳ:

ತಾಲೂಕಿನಲ್ಲಿ ಅನಧಿಕೃತವಾಗಿರುವ ರೆಸಾರ್ಟ್‌, ಹೋಂ ಸ್ಟೇ ಪತ್ತೆ ಹಚ್ಚಿ ತೆರವುಗೊಳಿಸಬೇಕೆಂದು ತಹಸೀಲ್ದಾರ್‌ ವಿಠ್ಠಲ್ ಚೌಗಲಾ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕಿನ ರೆಸಾರ್ಟ್‌, ಹೋಂ ಸ್ಟೇ ತೆರವುಗೊಳಿಸುವ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕುರಿತು ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ತಾಲೂಕು ಮಟ್ಟದ ತಂಡ ರಚಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಹಿನ್ನೆಲೆ ತಾಲೂಕು ವ್ಯಾಪ್ತಿಯಲ್ಲಿ ಸೂಕ್ತ ಪರವಾನಗಿ ಇಲ್ಲದೇ ರೆಸಾರ್ಟ್, ಹೋಂ ಸ್ಟೇ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಜೆಸ್ಕಾಂ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕು. ಎಲ್ಲ ರೆಸಾರ್ಟ್, ಹೋಂ ಸ್ಟೇ ದಾಖಲೆ ಪರಿಶೀಲಿಸಿ ಅಧಿಕೃತ ಹಾಗೂ ಅನಧಿಕೃತವಿರುವ ಕುರಿತಂತೆ ಪಟ್ಟಿ ತಯಾರಿಸಬೇಕು. ಈ ಕುರಿತು ರೆಸಾರ್ಟ್, ಹೋಂ ಸ್ಟೇ ಮಾಲೀಕರ ಜತೆಗೆ ಸಭೆ ನಿಗದಿಪಡಿಸಬೇಕು ಎಂದರು.

ಸಾರ್ವಜನಿಕರ ಸುರಕ್ಷತೆ, ಪ್ರವಾಸಿಗರ ರಕ್ಷಣೆ, ಕಾನೂನು ಸುವ್ಯವಸ್ಥೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಡ ರಚಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಪರವಾನಗಿ ಇಲ್ಲದೆ ನಡೆಸುತ್ತಿರುವ ಎಲ್ಲ ರೆಸಾರ್ಟ್, ಹೋಂ ಸ್ಟೇ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಮುಂದಿನ ಏಳು ದಿನಗಳ ಒಳಗಾಗಿ ದಾಖಲೆ ಪೂರೈಸದೆ ಇದ್ದಲ್ಲಿ ಅಂತಹ ರೆಸಾರ್ಟ್, ಹೋಂ ಸ್ಟೇ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು. ಒಂದು ವೇಳೆ ತೆರವುಗೊಳಿಸದೇ ಇದ್ದಲ್ಲಿ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಸಭೆಯಲ್ಲಿ ತಾಪಂ ಇಒ ದುಂಡಪ್ಪ ತುರಾದಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.