ನಾಗಮಂಗಲ ಪಟ್ಟಣದಲ್ಲಿ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ: ಸಚಿವ ಚಲುವರಾಯಸ್ವಾಮಿ

| Published : Oct 08 2024, 01:02 AM IST

ನಾಗಮಂಗಲ ಪಟ್ಟಣದಲ್ಲಿ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಅಲ್ಲದೇ, ಅಪಘಾತಗಳು ಕೂಡ ಸಂಭವಿಸುತ್ತಿವೆ. ಇನ್ನು ಕೆಲವೆಡೆ ಸರ್ಕಾರಿ ಕಚೇರಿಗಳ ಬಾಗಿಲುಗಳಿಗೆ ವಾಹನಗಳನ್ನು ನಿಲ್ಲಿಸಿ ಒಳಪ್ರವೇಶಿಸದಂತೆ ಜಮಾವಣೆಯಾಗಿರುತ್ತವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಅನಧಿಕೃತ ಶೆಡ್‌ಗಳನ್ನು ಕೂಡಲೇ ತೆರವುಗೊಳಿಸುವ ಜೊತೆಗೆ ಪರವಾನಗಿ ಪಡೆಯದೆ ನಿರ್ಮಿಸಿರುವ ಹಲವು ಕಟ್ಟಡಗಳನ್ನು ಪತ್ತೆಹಚ್ಚಿ ಪೊಲೀಸ್ ಇಲಾಖೆ ಸಹಾಯದೊಂದಿಗೆ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪುರಸಭೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮಾತನಾಡಿದರು.

ಪಟ್ಟಣದ ಮಂಡ್ಯ ಮತ್ತು ಮೈಸೂರು ರಸ್ತೆಯಲ್ಲಿ ಅನಧಿಕೃತ ಶೆಡ್‌ಗಳು ನಿರ್ಮಾಣವಾಗಿವೆ. ಇಷ್ಟು ಮಾತ್ರವಲ್ಲದೇ, ಪಟ್ಟಣದ ಹಲವು ಕಡೆಗಳಲ್ಲಿಯೂ ಇದೇ ರೀತಿಯಲ್ಲಿ ಅಕ್ರಮ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಬೇಕಿದೆ ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ ಶೆಡ್‌ಗಳನ್ನು ಕೂಡಲೇ ಪೊಲೀಸರ ಸಹಾಯದೊಂದಿಗೆ ತೆರವುಗೊಳಿಸುವುದು ಮಾತ್ರವಲ್ಲದೇ, ಆ ಶೆಡ್‌ಗಳ ಮಾಲೀಕರ ವಿರುದ್ಧ ಕಾನೂನು ಕ್ರಮಜರುಗಿಸಿ ಎಂದು ಸೂಚಿಸಿದರು.

ಪುರಸಭೆಗೆ ಸಂಬಂಧಿಸಿದ ಆಸ್ತಿಗಳಲ್ಲಿಯೂ ಹಲವರು ಅಕ್ರಮವಾಗಿ ಶೆಡ್‌ ನಿರ್ಮಿಸಿಕೊಂಡಿರುವ ಕುರಿತು ದೂರುಗಳಿವೆ. ಅಂತವುಗಳನ್ನು ತೆರವುಗೊಳಿಸಿ ಪುರಸಭೆ ಆಸ್ತಿಯನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು.

ಕಟ್ಟಡ ನಿರ್ಮಿಸಲು ಪರವಾನಗಿ ಪಡೆಯದಿರುವ ಹಾಗೂ ಕಂದಾಯ ಕಟ್ಟದಿರುವಂತಹ ಎಲ್ಲಾ ಕಟ್ಟಡಗಳಿಗೂ ಕಾನೂನಾತ್ಮಕವಾಗಿ ಕ್ರಮ ಜರುಗಿಸಬೇಕು. ಈ ವಿಚಾರವಾಗಿ ಪುರಸಭೆ ಸರ್ವಸದಸ್ಯರು ಯಾವುದೇ ಶಿಫಾರಸ್ಸುಗಳನ್ನು ಮಾಡದೆ ಸಹಕರಿಸುವ ಮೂಲಕ ಪಟ್ಟಣವನ್ನು ಸ್ವಚ್ಛವಾಗಿಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಮಾದರಿ ದಂಡ:

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಅಲ್ಲದೇ, ಅಪಘಾತಗಳು ಕೂಡ ಸಂಭವಿಸುತ್ತಿವೆ. ಇನ್ನು ಕೆಲವೆಡೆ ಸರ್ಕಾರಿ ಕಚೇರಿಗಳ ಬಾಗಿಲುಗಳಿಗೆ ವಾಹನಗಳನ್ನು ನಿಲ್ಲಿಸಿ ಒಳಪ್ರವೇಶಿಸದಂತೆ ಜಮಾವಣೆಯಾಗಿರುತ್ತವೆ ಎಂದರು.

ಈ ಸಮಸ್ಯೆಯನ್ನು ನಿವಾರಿಸಲು ಒಂದು ಕಡೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದಲ್ಲದೆ ಅವಶ್ಯವಿರುವ ಕಡೆಗಳಲ್ಲಿ ನೋ ಪಾರ್ಕಿಂಗ್ ಫಲಕ ಅಳವಡಿಸಬೇಕು. ಇಷ್ಟಾದರೂ ನಿಯಮ ಉಲ್ಲಂಘಿಸಿದರೆ ಬೆಂಗಳೂರು ಮಾದರಿಯಲ್ಲಿ ವಾಹನಗಳ ಮಾಲೀಕರ ಮನೆಗೆ ದಂಡದ ನೋಟಿಸ್ ಕಳುಹಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಈ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ವತಿಯಿಂದ ಕೂಡಲೇ ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ನಿಗದಿತ ಸ್ಥಳದಲ್ಲಿ ಮಾಂಸ ಮಾರಾಟ:

ಪಟ್ಟಣದ ಪ್ರಮುಖ ರಸ್ತೆ ಬದಿಗಳಲ್ಲಿ, ಕೆಲವು ದೇವಾಲಯಗಳ ಪಕ್ಕದಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿಯೂ ಮಾಂಸ ಮಾರಾಟ ಮಾಡುತ್ತಿರುವುದರಿಂದ ಬೀದಿನಾಯಿಗಳ ಕಾಟ ಹಾಗೂ ಅಶುಚಿತ್ವದಿಂದ ಗಬ್ಬುವಾಸನೆ ಬರುತ್ತಿರುವುದಾಗಿ ನಿವಾಸಿಗಳ ದೂರುಗಳಿವೆ ಎಂದರು.

ಪಟ್ಟಣದಲ್ಲಿ ಜನವಸತಿ ಪ್ರದೇಶದಿಂದ ಸ್ವಲ್ಪ ಅಂತರವಿರುವ ಸ್ಥಳದಲ್ಲಿ ಒಂದು ಕಡೆ ಜಾಗ ನಿಗಧಿಪಡಿಸಿ ಆ ನಿಗಧಿತ ಸ್ಥಳದಲ್ಲಿಯೇ ಮೀನು, ಕೋಳಿ, ಮೇಕೆ, ಕುರಿ ಮಾಂಸ ಮಾರಾಟವನ್ನು ನಡೆಸುವಂತೆ ಕ್ರಮವಹಿಸಬೇಕು. ಆ ಜಾಗ ಹೊರತುಪಡಿಸಿ ಬೇರೆ ಕಡೆಗೆ ಅನುಮತಿ ನೀಡದಿರಿ ಎಂದು ಮುಖ್ಯಾಧಿಕಾರಿಗೆ ಸಚಿವರು ಸೂಚಿಸಿದರು.

ಫುಟ್‌ಪಾತ್ ಅಂಗಡಿ ಸ್ಥಳಾಂತರಿಸಿ:

ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿ ಫುಟ್‌ಪಾತ್ ಅಂಗಡಿಗಳು ಹಾಗೂ ಶ್ರೀಸೌಮ್ಯಕೇಶವಸ್ವಾಮಿ ದೇವಾಲಯದ ರಸ್ತೆಯ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸಿ ಬ್ಯಾಂಕ್ ಆಫ್ ಬರೋಡಾ ಮುಂಭಾಗದಲ್ಲಿರುವ ಪುರಸಭೆಗೆ ಸೇರಿರುವ ಖಾಲಿ ಜಾಗದಲ್ಲಿ ಮೂಲ ಸೌಲಭ್ಯ ಒದಗಿಸುವ ಮೂಲಕ ಸ್ಥಳಾಂತರಿಸಬೇಕು. ಪಟ್ಟಣದ ಸ್ವಚ್ಛತೆಗೆ ಫುಟ್‌ಪಾತ್ ವ್ಯಾಪಾರಿಗಳು ಕೂಡ ಸಹಕರಿಸಬೇಕಿದೆ. ಸ್ಲಂ ರೀತಿಯಲ್ಲಿ ನಾಗಮಂಗಲವನ್ನು ನೋಡದೆ, ಒಂದು ಸ್ವಚ್ಛ ಪಟ್ಟಣವನ್ನಾಗಿಸಲು ಯೋಜನೆ ರೂಪಿಸೋಣ ಎಂದರು.

ಫುಡ್ ಜೋನ್ ನಿರ್ಮಿಸಲು ಕ್ರಮ:

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಗೋಬಿ, ಪಾನಿಪುರಿ, ಪಾಸ್ಟ್‌ಫುಡ್‌ನಂತಹ ಇನ್ನಿತರೆ ಚಾಟ್ಸ್ ಸೆಂಟರ್‌ಗಳು ವ್ಯಾಪಾರ ನಡೆಸುತ್ತಿದ್ದು ಇವುಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರಿಂದ ಪಟ್ಟಣದ ಅಶುಚಿತ್ವಕ್ಕೆ ಕಾರಣವಾಗುತ್ತಿರುವುದಾಗಿ ಹಲವು ದೂರುಗಳಿವೆ. ಆದ ಕಾರಣ ಒಂದೆಡೆಗೆ ಪಾಸ್ಟ್‌ಫುಡ್ ಹಾಗೂ ಚಾಟ್ಸ್ ಸೆಂಟರ್‌ ಸ್ಥಳಾಂತರಿಸಿ ಫುಡ್‌ಜೋನ್ ನಿರ್ಮಿಸುವ ಕ್ರಿಯಾಯೊಜನೆ ರಚಿಸಿ ಸ್ಥಳ ನಿಗಧಿ ಮಾಡುವಂತೆ ಪುರಸಭೆ ಎಂಜಿನಿಯರ್‌ಗೆ ಸೂಚಿಸಿದರು.

ಪಟ್ಟಣದಲ್ಲಿನ ಖಾಸಗಿ ಬಸ್ ನಿಲ್ದಾಣ ಹಾಗೂ ಟಿ.ಬಿ. ವೃತ್ತದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ನೆಲಸಮಗೊಳಿಸಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿ, ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಿಸಿ, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಚರಂಡಿ ದುರಸ್ಥಿ ಮತ್ತು ಒಳಚರಂಡಿ ನಿರ್ವಹಣೆಯನ್ನು ಸೂಕ್ತವಾಗಿ ನಿರ್ವಹಿಸಬೇಕು. ಉಳಿದ ಅಭಿವೃದ್ಧಿ ಕೆಲಸಗಳಿಗಿಂತ ಮೂಲ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಿ ತದನಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಚೌಡೇನಹಳ್ಳಿಯ ಅಂಗನವಾಡಿ ನಿರ್ಮಾಣಕ್ಕೆ ಜಾಗ ನಿಗದಿ ಮಾಡುವುದು, ಪುರಸಭೆಯ ವಿವಿಧ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಈಗಿರುವ ಪುರಸಭೆ ಕಾರ್ಯಾಲಯದ ಕಟ್ಟಡವನ್ನು ನೆಲಸಮಗೊಳಿಸಿ ಪಟ್ಟಣ ಪೊಲೀಸ್ ಠಾಣೆ ಎದುರು ಪುರಸಭೆ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣ, ಪಟ್ಟಣದ ಟ್ಯಾಂಕ್ ಮೈದಾನದ ಬಳಿುರುವ ಪುರಸಭೆಗೆ ಸೇರಿದ 3 ವಸತಿಗೃಹಗಳು ಶಿಥಿಲವಾಗಿದ್ದು ಅವುಗಳನ್ನು ತೆರವುಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಲಿ ಪುರಸಭೆ ಅಧ್ಯಕ್ಷ ಅಲೀಅನ್ಸರ್ ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮೀ ಅಶೋಕ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ , ಸದಸ್ಯರಾದ ತಿಮ್ಮಪ್ಪ, ಚನ್ನಪ್ಪ, ದಿವಾಕರ್, ಸೌಮ್ಯ ತಿರುಮಲಯ್ಯ, ಜಾಫರ್‌ ಷರೀಫ್ ಸೇರಿದಂತೆ ಹಲವರಿದ್ದರು.