ವಸತಿ ಯೋಜನೆಗೆ ಕಾಯ್ದಿರಿಸಿದ ಜಾಗ ಒತ್ತುವರಿ ತೆರವು

| Published : Jan 02 2025, 12:32 AM IST

ಸಾರಾಂಶ

ಸವಣೂರು ಪಟ್ಟಣದ ಹೊರ ವಲಯದಲ್ಲಿರುವ ಎಸ್.ಎಂ. ಕೃಷ್ಣ ನಗರ ಹಾಗೂ ರಾಜೀವ ಗಾಂಧಿ ನಗರದ ಹತ್ತಿರುವ ವಾಜಪೇಜ ನಗರ ವಸತಿ ಯೋಜನೆಯಡಿ ಜಿ ೧ ಮಾದರಿ ಗುಂಪು ಮನೆ ನಿರ್ಮಾಣಕ್ಕೆ ಕಾಯ್ದಿರಿಸಿರುವ ನಿವೇಶನದಲ್ಲಿ ಪುರಸಭೆ ಅಧಿಕಾರಿಗಳು ಮಂಗಳವಾರ ಒತ್ತುವರಿ ತೆರವಿಗೆ ಚಾಲನೆ ನೀಡಿದರು.

ಸವಣೂರು: ಪಟ್ಟಣದ ಹೊರ ವಲಯದಲ್ಲಿರುವ ಎಸ್.ಎಂ. ಕೃಷ್ಣ ನಗರ ಹಾಗೂ ರಾಜೀವ ಗಾಂಧಿ ನಗರದ ಹತ್ತಿರುವ ವಾಜಪೇಜ ನಗರ ವಸತಿ ಯೋಜನೆಯಡಿ ಜಿ+೧ ಮಾದರಿ ಗುಂಪು ಮನೆ ನಿರ್ಮಾಣಕ್ಕೆ ಕಾಯ್ದಿರಿಸಿರುವ ನಿವೇಶನದಲ್ಲಿ ಪುರಸಭೆ ಅಧಿಕಾರಿಗಳು ಮಂಗಳವಾರ ಒತ್ತುವರಿ ತೆರವಿಗೆ ಚಾಲನೆ ನೀಡಿದರು.

ಪಟ್ಟಣದ ಹೊರ ವಲಯದ ಸುಮಾರು ೧೭ ಎಕರೆ ೩೨ ಗುಂಟೆ ಜಮೀನಿನಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ ೧೨೦೬ ಜಿ+೧ ಮಾದರಿ ಗುಂಪು ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಅವುಗಳಲ್ಲಿ ಪ್ರಥಮ ಹಂತದಲ್ಲಿ ೧೮೬ ಮನೆಗಳು ನಿರ್ಮಾಣಗೊಂಡಿವೆ. ಉಳಿದಿರುವ ಮನೆ ನಿರ್ಮಾಣಕ್ಕಾಗಿ ರಾಜೀವ ಗಾಂಧಿ ವಸತಿ ನಿಗಮ ಖಾಲಿ ನಿವೇಶನ ನೀಡಲು ಪುರಸಭೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಪೊಲೀಸ್‌ ಅಧಿಕಾರಿಗಳ ಸಹಕಾರದೊಂದಿಗೆ ಖಾಲಿ ನಿವೇಶನ ಒತ್ತುವರಿಗೊಳಿಸಿರುವುದನ್ನು ತೆರವುಗೊಳಿಸಿದರು.

ಸರ್ಕಾರದ ನಿವೇಶನದಲ್ಲಿ ೧೫೦ಕ್ಕೂ ಹೆಚ್ಚಿನ ಕುಟುಂಬಸ್ಥರು ಅಕ್ರಮ ಮನೆ ನಿರ್ಮಾಣ, ತಗಡಿನ ಶೆಡ್‌ ನಿರ್ಮಾಣ ಮಾಡಿಕೊಂಡಿದ್ದರು.

ಅಧಿಕಾರಿಗಳಿಗೆ ಘೇರಾವು, ಆಕ್ರೋಶ: ಯಾವುದೇ ಮಾಹಿತಿ ನೀಡದೇ ಏಕಾಏಕಿ ಆಗಮಿಸಿ, ಜೆಸಿಬಿ ಮೂಲಕ ಮನೆ ಹಾಗೂ ಗುಡಿಸಲು ನೆಲಸಮಗೊಳಿಸಲಾಗುತ್ತಿದೆ ಎಂದು ನಿವಾಸಿಗಳು ಅಧಿಕಾರಿಗಳಿಗೆ ಘೇರಾವ್ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಧಿಕಾರಿ ನೀಲಪ್ಪ ಹಾದಿಮನಿ ಮಾತನಾಡಿ, ಸರ್ಕಾರ ಮಂಜೂರಿಗೊಳಿಸಿರುವ ಮನೆ ನಿರ್ಮಾಣಕ್ಕೆ ನಿವೇಶನ ನೀಡುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆದ್ದರಿಂದ ಸ್ಥಳೀಯರು ಸಹಕಾರ ನೀಡಬೇಕು ಎಂದು ಹೇಳಿದರು.