ಮದ್ದೂರು ನಗರದ ಪೇಟೆಬೀದಿಯ ಫುಟ್ ಪಾತ್ ಒತ್ತುವರಿಯನ್ನು ಬುಧವಾರ ಮುಂಜಾನೆ ನಗರಸಭೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದರು. ತೆರವು ವೇಳೆ ಫುಟ್ ಪಾತ್ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಏಕಾಏಕಿ ಒತ್ತುವರಿ ತೆರವು ಮಾಡಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತ.
ಮದ್ದೂರು:
ನಗರದ ಪೇಟೆಬೀದಿಯ ಫುಟ್ ಪಾತ್ ಒತ್ತುವರಿಯನ್ನು ಬುಧವಾರ ಮುಂಜಾನೆ ನಗರಸಭೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದರು.ಒತ್ತುವರಿ ತೆರವು ವೇಳೆ ಫುಟ್ ಪಾತ್ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಏಕಾಏಕಿ ಒತ್ತುವರಿ ತೆರವು ಮಾಡಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ನಗರಸಭೆ ಆಯುಕ್ತೆ ರಾಧಿಕಾ ನೇತೃತ್ವದಲ್ಲಿ ಲೋಕೋಪಯೋಗಿ, ನಗರಸಭೆ ಅಧಿಕಾರಿಗಳು ಸಿಪಿಐ ನವೀನ್ ಪಿಎಸ್ಐ ಮಂಜುನಾಥ್ ಹಾಗೂ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಕೊಲ್ಲಿ ಸರ್ಕಲ್ ನಿಂದ ಪೇಟೆ ಬೀದಿ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದರಲ್ಲದೆ ಕೆಲವು ವರ್ತಕರುಗಳು ಅಂಗಡಿ ಮುಂಭಾಗ ತಗಡಿನ ಶೀಟ್‌ಗಳ ನಿರ್ಮಿಸಿಕೊಂಡು ಹಣ್ಣು, ಹೂವು, ಕೋಳಿ ಹಾಗೂ ತಿಂಡಿ ತಿನಿಸುಗಳ ವ್ಯಾಪಾರ ಮಾಡುತ್ತಿದ್ದರು.ಇದರಿಂದ ವಾಹನಗಳ ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಈ ಬಗ್ಗೆ ಸಾರ್ವಜನಿಕರು ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವುಕಾರ್ಯ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತೆ ರಾಧಿಕಾ ತಿಳಿಸಿದರು.
ನಂತರ ಜೆಸಿಬಿ ಮತ್ತು ಟ್ರ್ಯಾಕ್ಟರ್ ಗಳ ಸಹಾಯದಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ಕೆಲವು ಅಂಗಡಿಗಳನ್ನು ಪೌರ ಕಾರ್ಮಿಕರ ಸಹಾಯದಿಂದ ಅಧಿಕಾರಿಗಳು ನೆಲಸಮಗೊಳಿಸಿದರು. ಅಧಿಕಾರಿಗಳ ಕ್ರಮಕ್ಕೆ ಬೆದರಿದ ಕೆಲವು ವರ್ತಕರುಗಳು ತಾವೇ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಭಾಗದ ಕಬ್ಬಿಣದ ಶೀಟ್ ಗಳನ್ನು ತೆರವು ಮಾಡಿಕೊಂಡರು.ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೇವಾನಂದ, ನಗರಸಭೆ ಎಡಿಎಲ್ ರಾಜೇಶ್, ಕಂದಾಯ ನಿರೀಕ್ಷಕ ಪುಟ್ಟಸ್ವಾಮಿ, ಪರಿಸರ ಅಭಿಯಂತರ ಅರ್ಚನ ಆರಾಧ್ಯ, ಪ್ರಶಾಂತ್ ಮತ್ತಿತರ ಅಧಿಕಾರಿಗಳು ಹಾಗೂ ನಗರಸಭೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.