ಸಾರಾಂಶ
ಲೋಕಸಭೆ ಚುನಾವಣೆಯ ನೀತಿ-ಸಂಹಿತೆ: ಚುನಾವಣಾ ಅಕ್ರಮಗಳ ನಿಗ್ರಹಕ್ಕೆ ಕ್ರಮ
ಕನ್ನಡಪ್ರಭ ವಾರ್ತೆ ಕಾರಟಗಿಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಕ್ರಮಗಳ ನಿಗ್ರಹಕ್ಕಾಗಿ ಕೊಪ್ಪಳ ರಾಯಚೂರು ಜಿಲ್ಲೆಗಳ ಗಡಿಭಾಗವಾಗಿರುವ ಕಾರಟಗಿ ಹೊರವಲಯದ ಚನ್ನಳ್ಳಿ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ.
ಕೊಪ್ಪಳ ಲೋಕಸಭೆ ಕ್ಷೇತ್ರವು ಪಕ್ಕದ ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ತಾಲೂಕುಗಳನ್ನು ಒಳಗೊಂಡಿದೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆ ಗಡಿ ಪ್ರದೇಶ ಪಟ್ಟಣದ ಹೊರವಲಯ ಸಿಂಧನೂರು ರಸ್ತೆಯಲ್ಲಿದ್ದು ಗಡಿಪ್ರದೇಶವಾಗಿದ್ದರಿಂದ ಜಿಲ್ಲಾಡಳಿತ ಇಲ್ಲಿ ಚೆಕ್‌ಪೋಸ್ಟ್ ಒಂದನ್ನು ಸ್ಥಾಪಿಸಿದೆ.ಚೆಕ್‌ಪೋಸ್ಟ್‌ಗೆ ಮೂಲಸೌಕರ್ಯಗಳಾದ ವಿದ್ಯುತ್ ಸಂಪರ್ಕ, ಸಿಸಿ ಕ್ಯಾಮೆರಾ, ಆಸನದ ವ್ಯವಸ್ಥೆ, ಫ್ಯಾನ್, ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಪುರಸಭೆಯಿಂದ ಒದಗಿಸಲಾಗಿದೆ.
ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ಮಾತನಾಡಿ, ಈಗಾಗಲೇ ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿದ್ದು, ಚೆಕ್ ಪೋಸ್ಟ್‌ನಲ್ಲಿ ಬಿಗಿ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿದೆ. ಈ ಚೆಕ್‌ಪೋಸ್ಟ್ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸಲಿದೆ. ಪಾಳಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು. ಈ ವೇಳೆ ಪೊಲೀಸ್ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.ಪೋಸ್ಟರ್ ತೆರವು:
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುತ್ತಿದಂತೆ ತಾಲೂಕು ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧಡೆ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಚಾರದ ಬ್ಯಾನರ್, ಫ್ಲೆಕ್ಸ್‌ಗಳು ಸೇರಿದಂತೆ ಪ್ರಧಾನ ನರೇಂದ್ರ ಮೋದಿ ಇರುವ ಚಿತ್ರಗಳನ್ನು ತೆರವುಗೊಳಿಸಿದರು.ಇಲ್ಲಿನ ಪುರಸಭೆ ಸಿಬ್ಬಂದಿ ಪಟ್ಟಣದಲ್ಲಿ ಎಲ್ಲಾ ಭಾಗದಲ್ಲಿರುವ ಬ್ಯಾನರ್, ಫ್ಲೆಕ್ಸ್‌ಗಳನ್ನು ತಕ್ಷಣ ತೆರವುಗೊಳಿಸಿದರು. ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ನಡೆಯುವ ಪಟ್ಟಣ ಸೇರಿದಂತೆ ವಿವಿಧಡೆ ಇರುವ ಔಷಧಿ ಅಂಗಡಿಗಳ ಮುಂದಿನ ಪ್ರಧಾನ ನರೇಂದ್ರ ಮೋದಿ ಚಿತ್ರದ ಸ್ಟ್ಯಾಂಡ್‌ಗಳನ್ನು ಮೊದಲು ಕಿತ್ತಿ ಹಾಕಿದರು. ಭಾನುವಾರದಿಂದ ಈ ತೆರವು ಕಾರ್ಯಕ್ರಮ ಹಮ್ಮಿಕೊಂಡ ಸಿಬ್ಬಂದಿ ಸೋಮವಾರವೂ ಸಹ ಮುಂದುವರೆಸಿದರು.
ಪ್ರಮುಖವಾಗಿ ಪಟ್ಟಣದ ನವಲಿ ವೃತ್ತ, ವಿಶೇಷ ಎಪಿಎಂಸಿ ಪ್ರದೇಶ, ಬೂದಗುಂಪ ರಸ್ತೆ, ನವಲಿ ರಸ್ತೆ ಸೇರಿ ಪಟ್ಟಣದ ವಿವಿಧ ಕಡೆ ಕೇಂದ್ರ ಸರ್ಕಾರದಿಂದ ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಾಕಿದ ಜೊತೆಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರ ಚಿತ್ರ ಇರುವ ಬ್ಯಾನರ್ ತೆರವುಗೊಳಿಸಿದರು.ಅಲ್ಲದೆ ತಾಲೂಕು ಆಡಳಿತದಿಂದ ತಾಲೂಕಿನ ವಿವಿಧ ಗ್ರಾಮಗಳ ಕಚೇರಿ ಮುಂಭಾಗದಲ್ಲಿರುವ ರಾಜಕಾರಣಿಗಳ ಭಾವಚಿತ್ರಗಳಿರುವ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು.
ಯಾವುದೇ ಪಕ್ಷ, ರಾಜಕಾರಣಿಗಳ ಭಾವಚಿತ್ರ ಇರುವಂತಹ ಬ್ಯಾನರ್‌ಗಳನ್ನು ತೆರವುಗೊಳಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಪಾಲಿಸಲಾಗುತ್ತಿದೆ. ಅಲ್ಲದೆ ಈಗಾಗಲೇ ತಾಲೂಕಿನ ಚೆನ್ನಳ್ಳಿ ಕ್ರಾಸ್‌ನಲ್ಲಿ ಪೋಲಿಸ್ ಇಲಾಖೆ, ಅಬಕಾರಿ ಇಲಾಖೆ, ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಪಿಐ ಪ್ರದೀಪ್ ಭಿಸೇ ಹೇಳಿದರು.ಎಚ್ಚರಿಕೆ:
ಪುರಸಭೆಯ ಅನುಮತಿ ಇಲ್ಲದೇ ಪಟ್ಟಣದಲ್ಲಿ ಜಾಹಿರಾತು ಅಥವಾ ಪ್ರಚಾರದ ಬ್ಯಾನರ್‌ಗಳನ್ನು ಅಳವಡಿಸುವಂತಿಲ್ಲ, ಅನುಮತಿ ಇಲ್ಲದೆ ಅಳವಡಿಸಿದರೆ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.ನೇಮಕ:
ಲೋಕಸಭೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿಯನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.