ಶಾಸಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ: ಯಾವಗಲ್ಲ

| Published : Mar 19 2024, 12:47 AM IST

ಶಾಸಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ: ಯಾವಗಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾರರಿಗೆ ಅಪಮಾನ ಮಾಡಬೇಡಿ. ಶಾಸಕ ಸ್ಥಾನದ ಜವಾಬ್ದಾರಿಯನ್ನು ಅರಿತು ಮಾತನಾಡಿ. ಕಾಯಂ ಶಾಸಕ ಎನ್ನುವ ಭ್ರಮೆಯಿಂದ ಹೊರಬನ್ನಿ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್‌ ಅವರು ಶಾಸಕ ಸಿ.ಸಿ. ಪಾಟೀಲ್‌ ಅವರನ್ನು ಎಚ್ಚರಿಸಿದ್ದಾರೆ.

ನರಗುಂದ: ಶಾಸಕ ಸಿ.ಸಿ. ಪಾಟೀಲರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ನರಗುಂದ ಮತಕ್ಷೇತ್ರದಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತ ನಂತರ ಬಿ.ಆರ್. ಯಾವಗಲ್ಲ ಅವರಿಗೆ ಹುಚ್ಚು ಹಿಡಿದಿದೆ ಎಂದು ಶಾಸಕ ಸಿ.ಸಿ. ಪಾಟೀಲ್‌ ಸಭೆಗಳಲ್ಲಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಚುನಾವಣೆ ಮೊದಲು 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ, ಉಪಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿದ್ದರು. ಇವರಿಗೆ ಹೆಚ್ಚು ಮತಗಳೂ ಬರಲಿಲ್ಲ, ಬಿಜೆಪಿ ಅಧಿಕಾರಕ್ಕೂ ಏರಲಿಲ್ಲ, ಇವರು ಉಪಮುಖ್ಯಮಂತ್ರಿಯೂ ಆಗಲಿಲ್ಲ. ಹಾಗಾಗಿ ಸಿ.ಸಿ.ಪಾಟೀಲರಿಗೇ ಹುಚ್ಚು ಹಿಡಿದಿದೆ ಎಂದರು.

ಮತದಾರರಿಗೆ ಅಪಮಾನ ಮಾಡಬೇಡಿ. ಶಾಸಕ ಸ್ಥಾನದ ಜವಾಬ್ದಾರಿಯನ್ನು ಅರಿತು ಮಾತನಾಡಿ. ಕಾಯಂ ಶಾಸಕ ಎನ್ನುವ ಭ್ರಮೆಯಿಂದ ಹೊರಬನ್ನಿ ಎಂದು ಯಾವಗಲ್‌ ಎಚ್ಚರಿಸಿದರು.

ಮತಕ್ಷೇತ್ರದ ವಿವಿಧ ಇಲಾಖೆಗಳಿಗೆ ನಮ್ಮ ಪಕ್ಷದ ಕಾರ್ಯಕರ್ತರನ್ನೇ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡುವಂತೆ ಸರ್ಕಾರಕ್ಕೆ ಪಟ್ಟಿ ಕಳಿಸಿದ್ದೇನೆ. ಯಾಕೆಂದರೆ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ. ಆದ್ದರಿಂದ ನಮ್ಮ ಕಾರ್ಯಕರ್ತರ ಹೆಸರನ್ನೇ ಕಳುಹಿಸಿದ್ದೇನೆ. ತಾವು ನನ್ನ ಸ್ಥಾನದಲ್ಲಿದ್ದಿದ್ದರೆ ಅದನ್ನೇ ಮಾಡುತ್ತಿದ್ದೀರಿ ಎಂದರು.

ಕಾಂಗ್ರೆಸ್ ತಾಲೂಕಾಧ್ಯಕ್ಷ ಪ್ರವೀಣ ಯಾವಗಲ್ಲ, ತಾಪಂ ಮಾಜಿ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ವಕೀಲ ಎಫ್.ವೈ. ದೊಡ್ಡಮನಿ, ಉದಯ ಮುಧೋಳೆ, ವೀರೇಶ ಚುಳಕಿ, ಮಲ್ಲೇಶಪ್ಪ ಅಬ್ಬಿಗೇರಿ, ಜಗದೀಶಗೌಡ ಕಗದಾಳ, ಬಿ.ಎನ್. ಮಾನೆ, ಎಂ.ಬಿ. ಅರಹುಣಶಿ, ರಾಮಕೃಷ್ಣ ಗೊಂಬಿ, ದ್ಯಾಮಣ್ಣ ಸವದತ್ತಿ, ಶಿವನಗೌಡ ಹೆಬ್ಬಳ್ಳಿ, ಬಿ.ಸಿ. ಹೆಬ್ಬಳ್ಳಿ, ನೀಲಪ್ಪ ಗುಡದನ್ನವರ ಉಪಸ್ಥಿತರಿದ್ದರು.