ಸಾರಾಂಶ
- ಸೂಚನೆಗೆ ಸ್ಪಂದಿಸದ ಹಿನ್ನೆಲೆ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ: ಮುಖ್ಯಾಧಿಕಾರಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುರಸಭೆ ಮಳಿಗೆಗಳ ಮುಂಭಾಗದಲ್ಲಿ ಗೂಡಂಗಡಿಗಳು, ಶೆಡ್‌ಗಳನ್ನು ಪೊಲೀಸ್ ರಕ್ಷಣೆಯಲ್ಲಿ ಸೋಮವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದೆರಡು ತಿಂಗಳಿನಿಂದ ಪುರಸಭೆಗೆ ಮಳಿಗೆಗಳ ಬಾಡಿಗೆದಾರರಿಗೆ ಮುಂದೆ ಚಾಚಿರುವ ಗೂಡಂಗಡಿ, ಶೆಡ್‌ಗಳನ್ನು ತೆರವುಗೊಳಿಸಲು ಸೂಚಿಸಲಾಗಿತ್ತು. ಯಾರೂ ಸ್ಪಂದಿಸಲಿಲ್ಲ. ಹಾಗಾಗಿ ಪೊಲೀಸರ ರಕ್ಷಣೆ ಪಡೆದು ಪುರಸಭೆಗೆ ಸೇರಿದ 8 ಮಳಿಗೆಗಳ ಮುಂಭಾಗ ಚಾಚಿದ್ದ ಗೂಡಂಗಡಿ ಮತ್ತು ಶೆಡ್‌ಗಳನ್ನು ತೆರವುಗೊಳಿಸಿದ್ದೇವೆ ಎಂದು ವಿವರಿಸಿದರು.
ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ನೂರಾರು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿರುತ್ತಾರೆ. ಇವರಲ್ಲಿ ಮಹಿಳೆಯವರು, ಮಕ್ಕಳು, ವೃದ್ಧರೂ ಇರುತ್ತಾರೆ. ಆದರೆ, ಬಸ್ ನಿಲ್ದಾಣದಲ್ಲಿ ಮಳಿಗೆಗೆಳ ಮುಂದೆ ಅನೇಕ ಗೂಡಂಗಡಿಗಳು, ಶೆಡ್‌ಗಳು ಇವೆ. ಇದರಿಂದ ಅಲ್ಲಿ ಪ್ರಯಾಣಿಕರು ನಿಲ್ಲಲು ಸ್ಥಳ ಇಲ್ಲದಂತಾಗಿತ್ತು. ಅಲ್ಲದೇ ಹಲವು ಬಾರಿ ಮಳಿಗೆ ವ್ಯಾಪ್ತಿಬಿಟ್ಟು ಮುಂದಕ್ಕೆ ಮುಂಗಟ್ಟು ಚಾಚಬೇಡಿ ಎಂದು ಹೇಳಿದ್ದರೂ ಕೆಲವರು ತಮ್ಮ ಸೂಚನೆಗೆ ಸೊಪ್ಪು ಹಾಕಿರಲಿಲ್ಲ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಹೆಚ್ಚಾಗಿದ್ದರಿಂದ ಅನಧಿಕೃತವಾಗಿ ಚಾಚಿದ್ದ ಶೆಡ್‌ಗಳನ್ನಷ್ಟೇ ತೆರವುಗೊಳಿಸಿದ್ದೇವೆ ಎಂದರು.ಖಾಸಗಿ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದರೆ ಅಂತಹ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಲಾಗುವುದು. ಈಗಲಾದರೂ ದ್ವಿಚಕ್ರ ವಾಹನ ಸವಾರರು ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ತಮ್ಮ ವಾಹನಗಳನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ಸಂತೆ ಮೈದಾನದಲ್ಲಿಯೂ ರಸ್ತೆ ಪಕ್ಕದಲ್ಲಿ ತರಕಾರಿ ಹಾಗೂ ಸೊಪ್ಪು ವ್ಯಾಪಾರ ಮಾಡುತ್ತಿದ್ದವರು ಸಂತೆ ಮೈದಾನದಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಮಂಗಳವಾರದಿಂದ ಮತ್ತೆ ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತ, ಪಾದಚಾರಿಗಳಿಗೆ ತೊಂದರೆ ಮಾಡಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗೂಡಂಗಡಿ, ವರ್ತಕರಿಂದ ಎಚ್ಚರಿಗೆ ನೀಡಿದರು.ಇನ್ನು ಮುಂದೆ ರಸ್ತೆ ಇಕ್ಕೆಲಗಳಲ್ಲಿ ಅಥವಾ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ತಮ್ಮ ಮಳಿಗೆಯಿಂದ ಮುಂದಕ್ಕೆ ಚಾಚಿ ಶೆಡ್ ನಿರ್ಮಾಣ ಮಾಡಿದರೆ, ಅಂತಹವರ ವಿರುದ್ಧ ನಿರ್ದಾಕ್ಷ್ಯಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೊಲೀಸ್ ಬಂದೋಬಸ್ತ್:ಅನಧಿಕೃತ ಗೂಡಂಗಡಿ, ಶೆಡ್‌ಗಳ ತೆರವು ವೇಳೆ ಪೊಲಿಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಿಎಸ್‌ಐ ನಿರ್ಮಲ, ಎಎಸೈಗಳಾದ ಅಶೋಕ ರೆಡ್ಡಿ, ತೀರ್ಥಲಿಂಗಪ್ಪ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪರಮೇಶ್ ನಾಯ್ಕ್, ರಾಮಚಂದ್ರ ಹಾಗೂ ವೆಂಕಟೇಶ್, ಹಿರಿಯ ಪೌರ ಕಾರ್ಮಿಕ ರಾಜಪ್ಪ ಇದ್ದರು.
- - -(ಕೋಟ್)
ಸಾರ್ವಜನಿಕರು ರಸ್ತೆ ಇಕ್ಕೆಲಗಳಲ್ಲಿ ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಬೇಡಿ. ಇದರಿಂದ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಮನಸ್ಸಿಗೆ ಬಂದ ರೀತಿಯಲ್ಲಿ ನಿಲ್ಲಿಸಿದರೆ, ಸಿಬ್ಬಂದಿ ದಂಡ ವಿಧಿಸುತ್ತಾರೆ. ಈಗಾಗಲೇ ನಿರ್ಧರಿಸಿರುವ ರಸ್ತೆಯ ಮಗ್ಗುಲಲ್ಲಿ ಮಾತ್ರ ವಾಹನಗಳ ನಿಲ್ಲಿಸಿ.- ಸುನೀಲ್ ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್.
- - --25ಎಚ್.ಎಲ್.ಐ2.ಜೆಪಿಜಿ:
ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಸೋಮವಾರ ಪುರಸಭೆ ಮಳಿಗೆಗಳ ಮುಂಭಾಗ ಅನಧಿಕೃತವಾಗಿ ಚಾಚಿಕೊಂಡಿದ್ದ ಗೂಡಂಗಡಿಗಳು, ಶೆಡ್‌ಗಳನ್ನು ತೆರವುಗೊಳಿಸಲಾಯಿತು.