ರಾತ್ರೋರಾತ್ರಿ ದೇವಳ ತೆರವು, ಶಾಲೆ ಕಾಮಗಾರಿ ಆರಂಭ

| Published : Nov 21 2024, 01:00 AM IST

ರಾತ್ರೋರಾತ್ರಿ ದೇವಳ ತೆರವು, ಶಾಲೆ ಕಾಮಗಾರಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ಸಂತೋಷ ಬಡಾವಣೆಯ ಸಿಎ ಸೈಟ್‌ನಲ್ಲಿ ನಿರ್ಮಿಸಿದ ಶಿವ- ಗಣೇಶ ದೇವಾಲಯ ಪೊಲೀಸ್ ಭದ್ರತೆ ತೆರವುಗೊಳಿಸಲಾಯಿತು. ಇದೇ ಸಮಯದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಶಿಕ್ಷಣ ಇಲಾಖೆಗೆ ನೀಡಿದ್ದ ಸಿ.ಎ.ಸೈಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶಿವ ಮತ್ತು ಗಣೇಶನ ದೇವಾಲಯಗಳನ್ನು ಜಿಲ್ಲಾಡಳಿತ ರಾತ್ರೋ ರಾತ್ರಿ ಕಾರ್ಯಾಚರಣೆ ತೆರವುಗೊಳಿಸಿರುವ ಘಟನೆ ಸ್ಥಳೀಯ ಸಂತೋಷ ನಗರದಲ್ಲಿ ಜರುಗಿದೆ.

ಮಂಗಳವಾರ ತಡರಾತ್ರಿ ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಟೀನ್‌ ಶೆಡ್‌ ತೆವುಗೊಳಿಸಿ, ದೇವರ ಮೂರ್ತಿಗಳನ್ನು ಸ್ಥಳಾಂತರಿಸಿ ತಕ್ಷಣವೇ ಮಂಜೂರಾಗಿರುವ ಶಾಲಾ ಕಟ್ಟಡ ಕಾಮಗಾರಿಯನ್ನು ಆರಂಭಿಸಲಾಯಿತು.

ಸಂತೋಷ್ ನಗರದ ದೇಗುಲದ ಸಿಎ ಸೈಟನ್ನು 2022 ಜೂ.1 ರಂದು ಪ್ರೌಢಶಾಲೆ ಕಟ್ಟಡಕ್ಕೆ ಮಂಜೂರು ಮಾಡಲಾಗಿತ್ತು. ಶಿಕ್ಷಣ ಇಲಾಖೆ ಯು ಸಹ 13 ಲಕ್ಷ ರು. ನೀಡಿ ಜಾಗವನ್ನು ಪಡೆದಿತ್ತು. ಸಮೀಪದ ಎಲ್‌ಬಿಎಸ್‌ ನಗರದ ಪ್ರೌಢಶಾಲೆಯ ನಾಲ್ಕು ಕೊಠಡಿಗಳನ್ನು ಇದೇ ಸ್ಥಳದಲ್ಲಿ ನಿರ್ಮಿಸುವುದಕ್ಕಾಗಿ ಕೆಕೆಆರ್‌ಡಿಬಿಯಿಂದಲೂ ಸುಮಾರು 1 ಕೋಟಿ ರು. ಮಂಜೂರಾಗಿದೆ. ಕಳೆದ ಎರಡು ವರ್ಷಗಳಿಂದ ಕೆಲಸ ಆರಂಭಗೊಂಡಿರಲಿಲ್ಲ. ಈ ನಡುವೆ ಬಡಾವಣೆಯ ನಿವಾಸಿಗಳು ಸ್ಥಳವನ್ನು ಉಳಿಸಿಕೊಳ್ಳುವ ಉದ್ದೇಶದಿಂದಾಗಿ ಮನೆ ಕಟ್ಟುವ ಸಿಮೆಂಟ್‌ ಹಾಗೂ ಇತರೆ ಸಾಮಾಗ್ರಿಗಳನ್ನು ಇಡಲು ಕಟ್ಟಿದ್ದ ಶೆಡ್ಡಿನಲ್ಲಿಯೇ ದೇಗುಲ ಮಾಡಿ, ಶಿವ ಮತ್ತು ಗಣೇಶನ ಮೂರ್ತಿಗಳನ್ನಿಟ್ಟು ಪೂಜೆ ಮಾಡುತ್ತಿದ್ದರು. ಈ ಕುರಿತು ಹಲವಾರು ಸಂಘಟನೆಗಳು ತಕರಾರು ಎತ್ತಿ, ಪ್ರತಿಭಟನೆಗಳನ್ನು ಸಹ ನಡೆಸಿದ್ದರು. ಇಷ್ಟೇ ಅಲ್ಲದ ಪ್ರಗತಿ ಪರಿಶೀಲನೆ ಸಭೆಗಳಲ್ಲಿಯೂ ಸಹ ಈ ಸಮಸ್ಯೆಯ ಕುರಿತು ಅನೇಕ ಚರ್ಚೆಗಳು ನಡೆದಿದ್ದವು.

ಬುಧವಾರ ಬೆಳಗಿನ ಸಹಾಯಕ ಆಯುಕ್ತ ಗಜಾನನ ಬಾಲೆ ನೇತೃತ್ವದಲ್ಲಿ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಹೆಚ್ಚುವರಿ ಎಸ್ಪಿ ಶಿವ ಕುಮಾರ, ಹರೀಶ, ಮೂರು ಜನ ಡಿವೈಎಸ್ಪಿ, 10 ಕ್ಕೂ ಹೆಚ್ಚು ಪಿಐ, 15 ಕ್ಕೂ ಹೆಚ್ಚು ಪಿಎಸ್‌ಐಗಳು, ನೂರಾರು ಜನ ಪೊಲೀಸರು ಸಂತೋಷ ನಗರದಲ್ಲಿನ ಅಕ್ರಮವಾಗಿ ನಿರ್ಮಿಸಿದ್ದ ದೇಗುಲವನ್ನು ತೆರವುಗೊಳಿಸಲು ಆಗಮಿಸುತ್ತಿದ್ದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಅಧಿಕಾರಿ, ಪೊಲೀಸ್‌ ಮತ್ತು ನಿವಾಸಿಗಳ ನಡುವೆ ಮಾತಿನ ಚಕಮಕಿ ಉಂಟಾಯಿತು. ಕೊನೆಗೆ ಪೊಲೀಸ್‌ ಭದ್ರತೆಯಲ್ಲಿ ಜೆಸಿಬಿಯಿಂದ ದೇಗುಲದ ಕಟ್ಟಡ ಹಾಗೂ ಶೆಡ್‌ನ್ನು ನೆಲಸಮ ಮಾಡಲಾಯಿತು. ತಕ್ಷಣವೇ ಶಾಲಾ ಕೋಠಡಿಗಳ ನಿರ್ಮಾಣಕ್ಕೆ ಕೆಲಸವನ್ನು ಸಹ ಆರಂಭಿಸಲಾಯಿತು.

ಇನ್ನು, ಎಲ್‌ಬಿಎಸ್‌ ನಗರದ ಪ್ರೌಢ ಶಾಲೆ ಶಿಥಿಲಾವಸ್ಥೆ ತಲುಪಿದ್ದರಿಂದ ಕಳೆದ ಎರಡು ವರ್ಷಗಳ ಹಿಂದೆ ಸಂತೋಷನಗರದ ಸಿಎ ಸೈಟ್ ಶಿಕ್ಷಣ ಇಲಾಖೆಯು ಪಡೆದುಕೊಂಡು ಅಲ್ಲಿ ಶಾಲೆ ನಿರ್ಮಿಸಲು ಯೋಜನೆ ರೂಪಿಸಿತ್ತು. ಆದರೆ ಕೆಲವರು ಸಿಎ ಸೈಟ್‌ ನಲ್ಲಿ ಅನಧಿಕೃತವಾಗಿ ದೇಗುಲ ನಿರ್ಮಿಸಿದ್ದರಿಂದ ಅದನ್ನು ತೆರವುಗೊಳಿಸಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ ಕೆ. ಹೇಳಿದರು.ದೇವಾಲಯ ತೆರವು ಖಂಡಿಸಿ ಬಿಜೆಪಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ರಾಯಚೂರು

ಸಿ.ಎ ಸೈಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶಿವ ಮತ್ತು ಗಣೇಶನ ದೇವಾಲಯವನ್ನು ಜಿಲ್ಲಾಡಳಿತ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ತೆರವು ಗೊಳಿಸಿರುವುದನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು, ಈ ವೇಳೆ ಪ್ರತಿಭಟನಾ ನಿರತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಆವರಣದ ಮುಂಭಾಗದಲ್ಲಿರುವ ಟಿಪ್ಪು ಸುಲ್ತಾನ್‌ ಉದ್ಯಾನವನದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್‌ ನೇತೃತ್ವದಲ್ಲಿ ಸೇರಿದ ಪಕ್ಷದ ವಿವಿಧ ಮೋರ್ಚಾಗಳ ಮುಖಂಡರು, ಪದಾಧಿಕಾರಿಗಳು, ಸಂಘಟನೆಗಳ ಪ್ರಮುಖರು ಹಿಂದೂ ದೇವಾಲಯಗಳ ಮೇಲೆ ಸರ್ಕಾರ, ಜಿಲ್ಲಾಡಳಿತದ ನಡೆಯನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಯ್ದ ಪ್ರಮುಖ ಮುಂಡರು ಜಿಲ್ಲಾಧಿಕಾರಿ ನಿತೀಶ ಕೆ. ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಅನಧಿಕೃತ ಕಟ್ಟಡದ ಹೆಸರಿನಲ್ಲಿ ಹಿಂದೂ ದೇವಾಲಯ ತೆರವು ಮಾಡಿದ್ದು ಈ ಕಾರ್ಯಾಚರಣೆಯನ್ನು ಮುಂದುವರೆಸಬೇಕು ನಗರದ ಎಲ್ಲ ರೀತಿಯ ಅಕ್ರಮ ಕಟ್ಟಡ, ಅನಧಿಕೃತ ಸ್ಮಾರಕಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿಯ ಧರಣಿ ನಿರತರು ಮುಖ್ಯ ರಸ್ತೆ ಮೇಲೆ ಬಂದು ಪ್ರತಿಭಟಿಸಿದರು ಇದರಿಂದಾಗಿ ಸಂಚಾರದ ಅಸ್ತವ್ಯವಸ್ಥ ಉಂಟಾಯಿತು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಶಾಸಕ ಡಾ.ಶಿವರಾಜ ಪಾಟೀಲ್‌, ಮುಖಂಡ ರವೀಂದ್ರ ಜಲ್ದಾರ್‌ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆದು ತಮ್ಮ ವಾಹನಗಳಲ್ಲಿ ಕರೆದುಕೊಂಡು ಹೋಗಿ ಬಿಡುಗಡೆಗೊಳಿಸಿದರು.ಈ ವೇಳೆ ಮಾತನಾಡಿದ ಶಾಸಕ ಡಾ.ಶಿವರಾಜ ಪಾಟೀಲ್, ಸಿಎ ಸೈಟ್‌ನಲ್ಲಿ ನಿರ್ಮಿಸಿದ್ದ ದೇಗುಲವನ್ನು ತೆರವುಗೊಳಿಸಿರುವುದು ಖಂಡ ನೀಯ, ನಗರದಲ್ಲಿ ಹಲವಾರು ಸಿಎ ಸೈಟ್‌ಗಳಿದ್ದು, ಅವುಗಳನ್ನು ನೀಡಲು ಸಿದ್ಧವಿದ್ದೇವೆ. ಈ ಕುರಿತು ಕೆಡಿಪಿಯಲ್ಲಿಯೂ ನಿರ್ಣಯಕ್ಕೆ ಬಂದಿ ದ್ದು ಇಷ್ಟರಲ್ಲಿಯೇ ಜಿಲ್ಲಾಡಳಿತ, ಅಧಿಕಾರಿಗಳು ಯಾರೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ನಗರದಲ್ಲಿ ಅನೇಕ ಕಡೆ ಅತಿಕ್ರಮ ವಾಗಿದೆ, ಅನಧಿಕೃತ ಕಟ್ಟಡಗಳನ್ನು ಸಹ ಕಟ್ಟಲಾಗಿದೆ ಅವುಗಳ ತೆರವುಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುಖಂಡರಾದ ರವೀಂದ್ರ ಜಲ್ದಾರ್, ಎನ್‌.ಶಂಕ್ರಪ್ಪ, ಶಿವಬಸಪ್ಪ ಮಾಲಿಪಾಟೀಲ್, ರಾಘವೇಂದ್ರ ಉಟ್ಕೂರು, ಸಿದ್ದನಗೌಡ, ಗೋಪಾಲ ರೆಡ್ಡಿ, ವಿ.ಪಿ.ರೆಡ್ಡಿ, ಪಲಗುಲ ನಾಗರಾಜ,ಪಿ. ಯಲ್ಲಪ್ಪ, ಸುಭಾಶ, ಶಿವಕುಮಾರ ಪೊಲೀಸ್‌ ಪಾಟೀಲ್‌, ವೆಂಕಟೇಶ ಮಡಿವಾಳ, ನರಸಪ್ಪ ಸೇರಿ ಅನೇಕರು ಇದ್ದರು.