ಸಾರಾಂಶ
ಭಟ್ಕಳ: ಮುರ್ಡೇಶ್ವರ ಕಡಲತೀರದಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿದ್ದ ತಾತ್ಕಾಲಿಕ ಅಂಗಡಿಗಳನ್ನು ಭಾನುವಾರ ಬೆಳಗ್ಗೆ ಕಂದಾಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ತೆರವುಗೊಳಿಸಿದರು.
ಕಡಲತೀರದಲ್ಲಿ ಈ ಅನಧಿಕೃತ ಅಂಗಡಿಗಳಿಂದ ಪ್ರವಾಸಿಗರಿಗೆ ಸಮರ್ಪಕವಾಗಿ ಸಂಚರಿಸಲು ಆಗದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದೆ. ಇತ್ತೀಚೆಗೆ ಕೋಲಾರದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮೃತಪಟ್ಟ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಪ್ರವಾಸಿಗರ ಓಡಾಟಕ್ಕೆ ತೊಂದರೆ ಆಗುತ್ತಿದ್ದ ಕಡಲತೀರದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಸ್ಥಳ ವಿಶಾಲಗೊಳ್ಳುವಂತೆ ಮಾಡಿ ಪ್ರವಾಸಿಗರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದೆ.ಭಾನುವಾರ ಬೆಳಗ್ಗೆ ೫ಕ್ಕೆ ಆರಂಭವಾದ ಬೀಚ್‌ನಲ್ಲಿರುವ ತಾತ್ಕಾಲಿಕ ಅಂಗಡಿಗಳ ತೆರವು ಕಾರ್ಯಾಚರಣೆಯು ಸಂಜೆ ವರೆಗೂ ಮುಂದುವರಿದಿತ್ತು. ಭಾನುವಾರ ಬೆಳಗ್ಗೆಯಿಂದ ಮುರ್ಡೇಶ್ವರ ಕಡಲತೀರದಲ್ಲಿ ಅನಧಿಕೃತವಾಗಿ ಮತ್ತು ಗ್ರಾಮ ಪಂಚಾಯಿತಿಯಿಂದ ಒಪ್ಪಿಗೆ ಇಲ್ಲದೇ ಇಟ್ಟುಕೊಂಡಿದ್ದ ಸುಮಾರು ೭೧ ತಾತ್ಕಾಲಿಕ ಅಂಗಡಿಗಳ ಸಹಿತ ಸಾಮಗ್ರಿಗಳನ್ನೂ ತೆರವುಗೊಳಿಸಲಾಗಿದೆ.
ಕಡಲತೀರದಲ್ಲಿ ಗ್ರಾಮ ಪಂಚಾಯಿತಿಗೆ ಪ್ರತಿ ತಿಂಗಳು ಸ್ವಚ್ಛತಾ ಶುಲ್ಕವೆಂದು ಪಾವತಿಸುವ 100 ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದು, ಇವುಗಳನ್ನು ತೆರವುಗೊಳಿಸಿಲ್ಲ. ಅಂಗಡಿ ತೆರವು ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎನ್., ತಹಸೀಲ್ದಾರ್ ನಾಗೇಂದ್ರ ಕೋಲಶೆಟ್ಟಿ, ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿ, ಜಾಲಿ ಪಟ್ಟಣ ಪಂಚಾಯಿತಿ, ಭಟ್ಕಳ ಪುರಸಭೆಯ ಸಿಬ್ಬಂದಿ ಭಾಗವಹಿಸಿದ್ದರು. ಡಿ.ವೈ.ಎಸ್.ಪಿ. ಮಹೇಶ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಬೋಟ್‌ಗಳ ಸ್ಥಳಾಂತರಕ್ಕೆ ಆಕ್ರೋಶ
ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪರವಾನಗಿ ಪಡೆದ ೩೦-೩೦ ಮೀ ಸ್ಥಳದಲ್ಲಿ ಇಡಲಾಗಿದ್ದ ಜಲಕ್ರೀಡೆಗಳ ಬೋಟ್‌ಗಳನ್ನೂ ತೆರವುಗೊಳಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತೆರವು ಕಾರ್ಯಾಚರಣೆಯಲ್ಲಿ ಜಲಕ್ರೀಡೆ ನಡೆಸುವ ಬೋಟ್‌ಗಳನ್ನು ಸರಿಯಾದ ರೀತಿಯಲ್ಲಿ ಬೇರೆಡೆಗೆ ಸ್ಥಳಾಂತರಿಸದೇ ಇರುವುದರಿಂದ ಅವುಗಳಿಗೆ ಡ್ಯಾಮೇಜ್ ಆಗಿದ್ದಲ್ಲದೇ ಅವುಗಳಲ್ಲಿರುವ ವಸ್ತುಗಳಿಗೂ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.ತೆರವು ಅಥವಾ ಸ್ಥಳಾಂತರ ಕಾರ್ಯಾಚರಣೆ ಬಗ್ಗೆ ಯಾವುದೇ ಸೂಚನೆ ನೀಡದೇ ಈ ರೀತಿಯಾಗಿ ನಮ್ಮ ಬೆಲೆ ಬಾಳುವ ಬೋಟ್‌ಗಳನ್ನು ತೆರವುಗೊಳಿಸಿದ್ದು ಸರಿಯಲ್ಲ. ಅಧಿಕಾರಿಗಳು ಮೊದಲೇ ಸೂಚನೆ ನೀಡಿದ್ದರೆ ನಾವೇ ನಮ್ಮ ಜವಾಬ್ದಾರಿಯಿಂದ ಬೋಟ್‌ಗಳನ್ನು ಸ್ಥಳಾಂತರ ಮಾಡುತ್ತಿದ್ದೆವು. ಅಲ್ಲದೇ ಜಲಕ್ರೀಡೆಗೆ ಸಂಬಂಧಪಟ್ಟ ಬೋಟುಗಳನ್ನು ಸಮುದ್ರ ಕಿನಾರೆಯಲ್ಲಿಯೇ ಇಡುವುದು ಸುರಕ್ಷತೆ ದೃಷ್ಟಿಯಿಂದ ಉತ್ತಮ ಎನ್ನುವುದು ಉಚ್ಚ ನ್ಯಾಯಾಲಯವೇ ಹೇಳಿದ್ದರೂ ಈ ರೀತಿ ಏಕಾಏಕಿ ಬೋಟುಗಳನ್ನು ತೆರವುಗೊಳಿಸಿದ್ದು ಸರಿಯಲ್ಲ ಎನ್ನುವುದು ಓಶಿಯನ್ ಅಡ್ವೆಂಚರ್ಸ್ ಅವರ ಆರೋಪವಾಗಿದೆ.