ಶಿಕ್ಷಕರು ಮತ್ತು ವೈದ್ಯರು ಪ್ರತಿ ತಿಂಗಳು ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಅಗತ್ಯವಿದೆ. ಈ ಮೂಲಕ ಮಕ್ಕಳಿಗೆ ಲೈಂಗಿಕ ಶಿಕ್ಷಣ, ಬಾಲ್ಯ ವಿವಾಹ ಹಾಗೂ ಪೋಕ್ಸೊ ವಿಚಾರಗಳ ಕುರಿತು ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಎನ್.ಹೇಮಂತ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿಕ್ಷಕರು ಮತ್ತು ವೈದ್ಯರು ಪ್ರತಿ ತಿಂಗಳು ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಅಗತ್ಯವಿದೆ. ಈ ಮೂಲಕ ಮಕ್ಕಳಿಗೆ ಲೈಂಗಿಕ ಶಿಕ್ಷಣ, ಬಾಲ್ಯ ವಿವಾಹ ಹಾಗೂ ಪೋಕ್ಸೊ ವಿಚಾರಗಳ ಕುರಿತು ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಎನ್.ಹೇಮಂತ್ ತಿಳಿಸಿದರು.ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಿಷನ್ ಸುರಕ್ಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮತ್ತು ವೈದ್ಯರು ಮಿಷನ್ ಸುರಕ್ಷಾ ಕಾರ್ಯಾಗಾರದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು. ಜಿಲ್ಲೆಯಲ್ಲಿ 146 ಪೋಕ್ಸೊ ಪ್ರಕರಣಗಳು ದಾಖಲಾಗಿದೆ. ಇದನ್ನು ತಡೆಗಟ್ಟಲು, ಅಗತ್ಯವಾದ ತರಬೇತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಿದ್ದು, ಇದನ್ನು ಶಿಕ್ಷಕರು ಬಳಕೆ ಮಾಡಿಕೊಂಡು ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಇಂದಿನ ಮಕ್ಕಳಿಗೆ ಲೈಂಗಿಕ ಶಿಕ್ಷಣ ಮತ್ತು ಆಪ್ತ ಸಮಾಲೋಚನೆಗೆ ಒಳಪಡಿಸುವುದು ಬಹು ಮುಖ್ಯವಾಗಿದೆ. ಶಾಲೆ, ಮನೆ ಹಾಗು ಸಮಾಜದಲ್ಲಾಗುವ ಅನೇಕ ಘಟನೆಗಳು ಅವರ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ತಪ್ಪು ದಾರಿಯನ್ನು ತುಳಿಯುವ ಸಾಧ್ಯತೆ ಇರುತ್ತದೆ ಎಂದರು.ಸಂಕುಚಿತ ಭಾವನೆ ತೆಗೆದು ಹಾಕುವುದು, ಶಿಕ್ಷಕರು ಮತ್ತು ವೈದ್ಯರು ಪ್ರತಿ ತಿಂಗಳು ಆಪ್ತ ಸಮಾಲೋಚನೆ ಮಾಡುವುದು ಹಾಗೂ ಬಾಲ್ಯ ವಿವಾಹದ ಮೇಲೆ ಏರಿರುವ ಮೂಡನಂಭಿಕೆ ಹೋಗಲಾಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರು, ವೈದ್ಯರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ್ ಮಾತನಾಡಿ, ನೈತಿಕವಾಗಿ ಮಕ್ಕಳು ಸದೃಢರಾಗಲು ತಂದೆ ತಾಯಿಯಂದಿರಷ್ಟೇ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಶಾಲೆಗಳಲ್ಲಿ ಮಕ್ಕಳ ಮೇಲೆ ಆಗುವ ದೌರ್ಜನ್ಯವನ್ನು ಶಿಕ್ಷಕರ ಬಳಿ ಬಂದು ಹೇಳಿದರೂ ಶಿಕ್ಷಕರು ಅದನ್ನು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಪೋಕ್ಸೋ ಸೆಕ್ಷನ್ 21 ರಡಿಯಲ್ಲಿ 2 ನೇ ಆರೋಪಿಯಾಗಿ ದಾಖಲಾಗುತ್ತಿದ್ದಾರೆ. ಈ ಬಗ್ಗೆ ಎಲ್ಲಾ ಶಿಕ್ಷಕರು ಅರಿತುಕೊಳ್ಳಬೇಕು. ಇಂತಹ ವಿಚಾರ ಶಿಕ್ಷಕರ ಗಮನಕ್ಕೆ ಬಂದ ಕೂಡಲೇ 112 ಅಥವಾ ಮಕ್ಕಳ ಸಹಾಯವಾಣಿ 1098ಗೆ ಸಂಪರ್ಕಿಸಿ ದೂರು ನೀಡಬೇಕು ಎಂದರು.ಮಕ್ಕಳ ಹೊಣೆಗಾರಿಕೆ ಶಿಕ್ಷಕರದಾಗಿದ್ದು, ಅವರಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್, ಇತರೆ ವಿಷಯಗಳ ಬಗ್ಗೆ ತಿಳಿಸಬೇಕು. ಅಶ್ಲೀಲ ಪದಗಳ ಬಳಕೆ, ಖಾಸಗಿ ಅಂಗಗಳನ್ನು ಮುಟ್ಟುವುದು, ಖಾಸಗಿ ವಿಡಿಯೋ, ಫೋಟೋ ಹಂಚಿಕೆ ಮಾಡುವುದು ತಪ್ಪು. ಇಂತಹ ಅಪರಾಧ ಕೃತ್ಯ ಮಾಡಿದರೆ 67ಬಿ ಐಐಟಿ ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂಬ ಕಾನೂನಿನ ಮಾಹಿತಿಯನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಡಾ.ವೀಣಾಭಟ್ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಜಿಪಂ ಯೋಜಾನಾಧಿಕಾರಿ ನಂದಿನಿ, ಬಿಇಒ ರಮೇಶ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್, ತಾಲೂಕು ಇಒ ಪರಮೇಶ್ವರಪ್ಪ, ವಿವಿಧ ತಾಲೂಕಿನ ಶಿಕ್ಷಕರು, ನೋಡಲ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.