ಅನಧಿಕೃತ ಕ್ಲಿನಿಕ್‌ಗಳ ಬಾಗಿಲು ಮುಚ್ಚಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Oct 16 2024, 12:47 AM IST / Updated: Oct 16 2024, 12:48 AM IST

ಅನಧಿಕೃತ ಕ್ಲಿನಿಕ್‌ಗಳ ಬಾಗಿಲು ಮುಚ್ಚಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜೆಜೆಎಂ ಕಾಮಗಾರಿಗಳು ಗುಣಮಟ್ಟದಿಂದ ನಡೆದಿಲ್ಲ. ಗುತ್ತಿಗೆದಾರರು ನಿಯಮಾನುಸಾರ ಕೆಲಸ ಮಾಡಿಲ್ಲ. ಪರಿಣಾಮಕಾರಿಯಾಗಿ ಕೆಲಸ ಮಾಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದೀರಿ. ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ನೀರಿನ ಸಮಸ್ಯೆ ನಿರ್ಮಾಣವಾಗದಂತೆ ಕ್ರಮವಹಿಸಿ ಎಂದು ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಎಇಇಗೆ ಶಾಸಕರ ತಾಕೀತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯದೆ ನಡೆಯುತ್ತಿರುವ ಅನಧಿಕೃತ ಕ್ಲಿನಿಕ್‌ಗಳ ಬಾಗಿಲು ಮುಚ್ಚಿಸುವಂತೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಅವರಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್‍ಯಕ್ರಮಗಳ ಪ್ರಗತಿ ಪರಿಶೀಲನೆ(ಕೆಡಿಪಿ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಎಷ್ಟು ಕ್ಲಿನಿಕ್‌ಗಳಿವೆ?. ಆರೋಗ್ಯ ಇಲಾಖೆಯಿಂದ ಅನುಮತಿ ಪಡೆದ, ಅನಧಿಕೃತ ಕ್ಲಿನಿಕ್‌ಗಳು ಎಷ್ಟಿವೆ ಎಂದು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಸಿದ ಡಾ.ಸಿ.ಎ.ಅರವಿಂದ್ ಅವರು ತಾಲೂಕಿನಲ್ಲಿ ಒಟ್ಟು 46 ಕ್ಲಿನಿಕ್‌ಗಳಿದ್ದು, ಇದರಲ್ಲಿ 26 ಕ್ಲಿನಿಕ್ ಅನುಮತಿ ಪಡೆದಿವೆ. 10 ಕ್ಲಿನಿಕ್ ಅನುಮತಿಗೆ ಅರ್ಜಿ ಸಲ್ಲಿಸಿವೆ. 10 ಕ್ಲಿನಿಕ್ ಯಾವುದೇ ಅನುಮತಿ ಪಡೆಯದೆ ನಡೆಸುತ್ತಿವೆ ಎಂದು ವಿವರಿಸಿದರು. ಅನುಮತಿ ಪಡೆಯದೆ ನಡೆಸುತ್ತಿರುವ ಅಕ್ರಮ ಕ್ಲಿನಿಕ್‌ಗಳನ್ನು ಮುಲಾಜಿಲ್ಲದೆ ಬಾಗಿಲು ಮುಚ್ಚಿಸಿ ಯಾವುದೇ ಒತ್ತಡಕ್ಕೂ ಮಣಿಯಬೇಡಿ ಎಂದು ಸೂಚಿಸಿದರು.

ಅಕ್ರಮ ಮದ್ಯ, ಗಾಂಜಾ ಮಾರಾಟ ತಡೆಯಿರಿ:

ಪ್ರತಿ ಗ್ರಾಮದ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಎಲ್ಲೆಂದರಲ್ಲಿ ಗಾಂಜಾ ಮಾರಾಟ ಪ್ರಕರಣಗಳು ನಡೆಯುತ್ತಿವೆ. ಇವುಗಳಿಗೆ ಕಠಿವಾಣ ಹಾಕುವಲ್ಲಿ ಅಬಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ. ಯುವಕರು ಮದ್ಯ, ಗಾಂಜಾ ಸೇವನೆಯಂತ ದುಶ್ಚಟಕ್ಕೆ ಒಳಗಾಗಿ ದಾರಿ ತಪ್ಪುತ್ತಿದ್ದಾರೆ ಎಂದರು.

ಹೊಸ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡಬೇಡಿ. ಗ್ರಾಮಗಳಲ್ಲಿ ಅಕ್ರಮ ಮದ್ಯ, ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿ. ದುಶ್ಚಟಗಳಿಂದಾಗುವ ಪರಿಣಾಗಳ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದರು.

ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ ಮಾತನಾಡಿ, ಸೆಸ್ಕ್ ಇಲಾಖೆಯಿಂದ ಕುಸುಮ್-ಬಿ ಯೋಜನೆಯಡಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡಿಕೊಳ್ಳಲು ರಾಜ್ಯ ಹಾಗೂ ಕೇಂದ್ರಗಳಿಂದ ಶೇ.80 ರಷ್ಟು ಸಬ್ಸಡಿ ನೀಡುತ್ತಿದೆ. ರೈತರು ಕೇವಲ ಶೇ.20ರಷ್ಟು ಹಣ ಬರಿಸಬೇಕು. ಸೋಲಾರ್ ಗರ್ ಯೋಜನೆಯಡಿ ಮನೆಗಳಿಗೂ ಸಹ ರಿಯಾಯಿತಿ ದರದಲ್ಲಿ ಸೋಲಾರ್ ಅಳವಡಿಕೆ ಮಾಡಿಕೊಳ್ಳಬಹುದು ಎಂದರು.

ಪ್ರತಿಕ್ರಿಯಿಸಿದ ಶಾಸಕರು, ಈ ಯೋಜನೆಯ ಬಗ್ಗೆ ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಪ್ರಚಾರ ನಡೆಸಿ ಅರಿವು ಮೂಡಿಸಬೇಕು. ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕಿನಲ್ಲಿ 5927 ಎಕ್ಟೇರ್ ಪ್ರದೇಶವನ್ನು ಪರಿಭಾವಿತ ಭೂಮಿಯ ಎಂದು ಗುರುತಿಸಿ ಅರಣ್ಯ ಇಲಾಖೆ ನೀಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ನಡೆಸಿ ಇಂಡೀಕರಣಗೊಳಿಸಿ ಇಲಾಖೆಗೆ ನೀಡಿದೆ. ಆ ಸ್ಥಳಗಳಲ್ಲಿ ಹಸೀರಿಕರಣ ಯೋಜನೆಯಡಿ ಗಿಡಗಳನ್ನು ನೆಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಜಗದೀಶ್‌ಗೌಡ ವಿವರಿಸಿದರು.

ಪ್ರತಿಕ್ರಿಯಿಸಿದ ಶಾಸಕರು, ಸರ್ವೇ ನಡೆಸುವಂತೆ ಸರ್ವೇ ಅಧಿಕಾರಿಗೆ ಸೂಚಿಸಿದರು. ಅಲ್ಲದೇ, ಹಸಿರೀಕರಣ ಯೋಜನೆಯಡಿ ಬೇಬಿಬೆಟ್ಟದಲ್ಲಿ ನಡೆಸಿದರುವ ಗಣಿಗಾರಿಕೆ ಪ್ರದೇಶದಲ್ಲಿ ಗಿಡನೆಟ್ಟು ಪ್ಲಾಂಟೇಷನ್ ನಿರ್ಮಿಸಬೇಕು. ಶಂಭೂವಿನಹಳ್ಳಿ ಬಳಿ ಅರಣ್ಯ ಪ್ರದೇಶದ ಮಧ್ಯದಲ್ಲಿ ಗಣಿಗಾರಿಕೆಗೆ ನೀಡಲಾಗಿರುವ ಜಾಗವನ್ನು ರದ್ದುಗೊಳಿಸಿ ಮತ್ತೆ ಇಲಾಖೆಗೆ ತೆಗೆದುಕೊಳ್ಳಿ ಎಂದು ಸೂಚಿಸಿದರು.

ಜೆಜೆಎಂ ಕಾಮಗಾರಿಗಳು ಗುಣಮಟ್ಟದಿಂದ ನಡೆದಿಲ್ಲ. ಗುತ್ತಿಗೆದಾರರು ನಿಯಮಾನುಸಾರ ಕೆಲಸ ಮಾಡಿಲ್ಲ. ಪರಿಣಾಮಕಾರಿಯಾಗಿ ಕೆಲಸ ಮಾಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದೀರಿ. ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ನೀರಿನ ಸಮಸ್ಯೆ ನಿರ್ಮಾಣವಾಗದಂತೆ ಕ್ರಮವಹಿಸಿ ಎಂದು ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಎಇಇಗೆ ತಾಕೀತು ಮಾಡಿದರು.

ಸಹಕಾರಿ ಇಲಾಖೆಯವರು ತಾಲೂಕಿನ ಎಲ್ಲಾ ಸಹಕಾರಿ ಸಂಘಗಳನ್ನು ತನಿಖೆ ನಡೆಸಿ ನಡೆದಿರುವ ಅಕ್ರಮಗಳನ್ನು ಬೆಳಕಿಗೆ ತರಬೇಕು. ಸಂಘಗಳು ಸರಿಯಾಗಿ ಕೆಲಸ ಮಾಡಿದರೆ ಖಾಸಗಿ ಫೈನಾನ್ಸ್‌ಗಳು ಬಾಗಿಲು ಮುಚ್ಚಿಕೊಂಡು ಹೋಗುವಂತೆ ಮಾಡಬಹುದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಹಕಾರ ಸಂಘಗಳು ಕೆಲಸ ಮಾಡಬೇಕು ಎಂದು ಸಹಕಾರ ಇಲಾಖೆ ಅಧಿಕಾರಿ ನಿರ್ಮಲಾ ಅವರಿಗೆ ಸೂಚಿಸಿದರು.

ಸಭೆಯಲ್ಲಿ ತಾಪಂ ಆಡಳಿತಾಧಿಕಾರಿಯೂ ಆದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ತಾಪಂ ಇಓ ಲೋಕೇಶ್‌ಮೂರ್ತಿ, ಸುರೇಂದ್ರ ಹಾಜರಿದ್ದರು.