ಕನ್ನಡಪ್ರಭ ವಾರ್ತೆ ಯಲ್ಲಾಪುರ

ಭಾರತ ವಿಶ್ವಗುರುವಾಗುವಲ್ಲಿ ಯೋಗ ಮಹತ್ವದ ಕೊಡುಗೆ ನೀಡಿದೆ. ಮಾನಸಿಕ, ಬೌದ್ಧಿಕ ಮತ್ತು ಸದೃಢ ಶರೀರ ಬೆಳೆಸಿಕೊಳ್ಳಲು ಯೋಗ ಶಾಸ್ತ್ರ ತೀರಾ ಅಗತ್ಯವಾಗಿದೆ. ನಮ್ಮ ಋಷಿಮುನಿಗಳು ಈ ಯೋಗ ಶಾಸ್ತ್ರವನ್ನು ಮನುಕುಲಕ್ಕೆ ನೀಡಿದ್ದಾರೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ಭಾನುವಾರ ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದ ತಪೋವನದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್, ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್ ಹಾಗೂ ಯಲ್ಲಾಪುರ ತಾಲೂಕು ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.

ರಾಜ್ಯ ಅಮೆಚೂರ್ ಯೋಗ ಅಸೋಸಿಯೇಶನ್ ಚೇರ್ಮನ್ ಮತ್ತು ರಾಷ್ಟ್ರೀಯ ಯೋಗ ಫೆಡರೇಶನ್ ಕಾರ್ಯದರ್ಶಿ ಜಿ.ಎನ್. ಕೃಷ್ಣಮೂರ್ತಿ, ಅಧ್ಯಕ್ಷತೆ ವಹಿಸಿದ್ದ ಯೋಗ ಫೆಡರೇಶನ ರಾಜ್ಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ ಅನಿಲ ಕರಿ ಮಾತನಾಡಿದರು.

ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಪಿ.ಎನ್. ಗಣೇಶಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ನಟರಾಜ, ಉದ್ಯಮಿ ಬಾಲಕೃಷ್ಣ ನಾಯಕ, ಲಿಂಗಾಯತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ, ಸ್ವಾಗತ ಸಮಿತಿಯ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಈಶ್ವರೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕಿ ಬಿ.ಕೆ. ಲೀಲಕ್ಕ ಉಪಸ್ಥಿತರಿದ್ದರು. ಮಾತೃಮಂಡಳಿ ಅಧ್ಯಕ್ಷೆ ಆಶಾ ಬಗನಗದ್ದೆ ಪ್ರಾರ್ಥಿಸಿದರು. ಯೋಗ ಸ್ಪರ್ಧೆ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶಂಕರ ಭಟ್ಟ ತಾರಿಮಕ್ಕಿ ಸ್ವಾಗತಿಸಿದರು. ಶಿಕ್ಷಕರಾದ ಸದಾನಂದ ದಬಗಾರ, ಸೌಮ್ಯಶ್ರೀ ಹಾನಗಲ್ ನಿರ್ವಹಿಸಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಭಟ್ಟ ಆನೆಜಡ್ಡಿ ವಂದಿಸಿದರು.ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ವಿವಿಧ ೧೭ ವಿಭಾಗಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ೩೫೦ ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ್ದರು.