ರಾಜ್ಯದ 5 ಆರೋಗ್ಯ ಕೇಂದ್ರದಲ್ಲಿರುವ ಜನೌಷಧ ಕೇಂದ್ರ ಮುಚ್ಚುವುದಕ್ಕೆ ತಡೆ

| Published : Jul 10 2025, 01:46 AM IST

ರಾಜ್ಯದ 5 ಆರೋಗ್ಯ ಕೇಂದ್ರದಲ್ಲಿರುವ ಜನೌಷಧ ಕೇಂದ್ರ ಮುಚ್ಚುವುದಕ್ಕೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಸೇರಿ ರಾಜ್ಯದ ವಿವಿಧ ಐದು ಆರೋಗ್ಯ ಸಮುದಾಯ ಕೇಂದ್ರಗಳಲ್ಲಿ ಇರುವ ಜನೌಷಧ ಕೇಂದ್ರಗಳನ್ನು ಮುಚ್ಚುವುದಕ್ಕೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಸೇರಿ ರಾಜ್ಯದ ವಿವಿಧ ಐದು ಆರೋಗ್ಯ ಸಮುದಾಯ ಕೇಂದ್ರಗಳಲ್ಲಿ ಇರುವ ಜನೌಷಧ ಕೇಂದ್ರಗಳನ್ನು ಮುಚ್ಚುವುದಕ್ಕೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಗಳನ್ನು ಕೇಂದ್ರ ಮುಚ್ಚುವಂತೆ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರದ ತ್ಯಾಮಗೊಂಡ್ಲು ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಜನೌಷಧ ಕೇಂದ್ರದ ಮಾಲೀಕ ಟಿ.ಎನ್.ಪ್ರದೀಪ್ ಸೇರಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ, ಸುಳ್ಯ ತಾಲೂಕು ಆಸ್ಪತ್ರೆ, ಶಿರಾಳಕೊಪ್ಪದ ಸಮುದಾಯ ಆರೋಗ್ಯ ಕೇಂದ್ರ, ಕಡೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಜನೌಷಧ ಕೇಂದ್ರಗಳ ಮಾಲೀಕರು ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.

ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಪೀಠ, ಅರ್ಜಿದಾರರ ಜನೌಷಧ ಕೇಂದ್ರಗಳನ್ನು ಮುಚ್ಚುವುದು ಬೇಡ ಎಂದು ನಿರ್ದೇಶಿಸಿ ಮಧ್ಯಂತರ ತಡೆ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲ ಅನಿರುದ್ಧ ಎ.ಕುಲಕರ್ಣಿ, ಜನೌಷಧ ಕೇಂದ್ರ ತೆರೆಯಲು ಮೂಲಸೌಕರ್ಯ ಕಲ್ಪಿಸಲು ಸಾಕಷ್ಟು ವೆಚ್ಚ ಮಾಡಲಾಗಿದೆ. ಜನರಿಗೆ ಶೇ.50ರಿಂದ 90ರಷ್ಟು ರಿಯಾಯಿತಿ ದರದಲ್ಲಿ ಔಷಧ ನೀಡಲಾಗುತ್ತಿದೆ. ಸರ್ಕಾರದ ಆದೇಶದಿಂದ ಅರ್ಜಿದಾರರ ಜೀವನಾಧಾರಕ್ಕೆ ತೊಂದರೆಯಾಗಲಿದೆ ಮತ್ತು ಸಾರ್ವಜನಿಕರಿಗೂ ತೊಂದರೆ ಉಂಟಾಗಲಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಆ ಆದೇಶ ರದ್ದು ಕೋರಿ ಬಾಲ್ಕಿ ಮೂಲದ ಶ್ರೀಕಾಂತ್‌ ಅನಂತಾಚಾರ್ಯ ಜೋಶಿ ಸೇರಿ ಜನೌಷಧ ಕೇಂದ್ರಗಳ 19 ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರು 19 ಅರ್ಜಿದಾರರಿಗೆ ಸೀಮಿತವಾಗಿ ಆರೋಗ್ಯ ಇಲಾಖೆಯ ಆದೇಶಕ್ಕೆ ಈಗಾಗಲೇ ತಡೆಯಾಜ್ಞೆ ನೀಡಿದೆ.