ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಮನಗರ ನಗರಸಭೆ ಪ್ರಾಯೋಗಿಕವಾಗಿ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಅಳವಡಿಸಿದ್ದ ಕ್ಲಾತ್ ವೆಂಡಿಂಗ್ ಮಷಿನ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ನಗರದಲ್ಲಿ ಇನ್ನೂ 8 ಕಡೆ ಬಟ್ಟೆ ಬ್ಯಾಗ್ ಯಂತ್ರಗಳಿಗೆ ಚಾಲನೆ ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಮನಗರ ನಗರಸಭೆ ಪ್ರಾಯೋಗಿಕವಾಗಿ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಅಳವಡಿಸಿದ್ದ ಕ್ಲಾತ್ ವೆಂಡಿಂಗ್ ಮಷಿನ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ನಗರದಲ್ಲಿ ಇನ್ನೂ 8 ಕಡೆ ಬಟ್ಟೆ ಬ್ಯಾಗ್ ಯಂತ್ರಗಳಿಗೆ ಚಾಲನೆ ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಹೇಳಿದರು.ನಗರದ ರಾಯರದೊಡ್ಡಿ ವೃತ್ತ ಸೇರಿದಂತೆ, ಪ್ರಮುಖ ವೃತ್ತ ಹಾಗೂ ರಸ್ತೆ ಬದಿಗಳಲ್ಲಿ ಅಳವಡಿಸಿರುವ ಒಟ್ಟು 8 ಕ್ಲಾತ್ ವೆಂಡಿಂಗ್ ಮಷಿನ್ ಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ನಗರದ ರಾಯರದೊಡ್ಡಿ ಸರ್ಕಲ್, ಕೆಂಪೇಗೌಡ ಸರ್ಕಲ್ , ಸುಂದರ್ ಸ್ವೀಟ್ಸ್ ಬೇಕರಿ, ಜನತಾಕಾಲೋನಿ, ಐಜೂರು ವೃತ್ತ, ರಾಜು ಆಸ್ಪತ್ರೆ, ಅಂಬೇಡ್ಕರ್ ಭವನ, ಅರ್ಕೇಶ್ವರ ಕಾಲೋನಿ ಬಳಿ ಕ್ಲಾತ್ ವೆಂಡಿಂಗ್ ಮಿಷನ್ ಗಳನ್ನು ಅಳವಡಿಸಿದ್ದು, ಈ ಮಷಿನ್ ನಲ್ಲಿ 10 ರುಪಾಯಿ ಪಾವತಿಸಿ ಬಟ್ಟೆ ಬ್ಯಾಗ್ ಗಳನ್ನು ಪಡೆದು ಜನರು ಮನೆಗಳಿಗೆ ತರಕಾರಿ, ಆಹಾರ ಪದಾರ್ಥಗಳನ್ನು ಖರೀದಿಸಿ ಕೊಂಡೊಯ್ಯಬಹುದಾಗಿದೆ.ಪ್ಲಾಸ್ಟಿಕ್ ಮುಕ್ತ ನಗರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ರಾಮನಗರ ನಗರಸಭೆ ಬಟ್ಟೆಯ ಕೈಚೀಲ ನೀಡುವ ಯಂತ್ರವನ್ನು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಳವಡಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿತ್ತು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಹಿನ್ನೆಲೆಯಲ್ಲಿ ನಗರದ ವ್ಯಾಪಾರ ವಹಿವಾಟು ಹಾಗೂ ಜನನಿಬಿಡ ಸ್ಥಳಗಳಾದ 8 ಕಡೆಗಳಲ್ಲಿ ಎನಿ ಟೈಮ್ ಕ್ಲಾತ್ ಬ್ಯಾಗ್ ವೆಂಡಿಂಗ್ ಮಷಿನ್ ಅನ್ನು ಅಳವಡಿಸಲಾಗಿದೆ. ಎಟಿಎಂ ಮಷಿನ್‌ನಲ್ಲಿ ಹಣ ತೆಗೆದುಕೊಳ್ಳುವ ಮಾದರಿಯಲ್ಲೇ ಇದರಿಂದ ಬಟ್ಟೆಯ ಚೀಲ ತೆಗೆದುಕೊಳ್ಳಬಹುದು. ಈ ಯಂತ್ರದಲ್ಲಿ 10 ರುಪಾಯಿ ನಾಣ್ಯ ಹಾಕಿದರೆ ಒಂದು ಬಟ್ಟೆ ಚೀಲ ಬರುತ್ತದೆ.ರಾಯರದೊಡ್ಡಿ ವೃತ್ತದಲ್ಲಿ ಕ್ಲಾತ್ ವೆಂಡಿಂಗ್ ಮಷಿನ್ ಗೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸಾರ್ವಜನಿಕರು ಬಟ್ಟೆ ಬ್ಯಾಗ್ ಗಳನ್ನು ಬಳಸುವಂತೆ ಅರಿವು ಮೂಡಿಸಲು ನಗರಸಭೆ ವತಿಯಿಂದ ಪಟ್ಟಣದ 8 ಕಡೆ ಕ್ಲಾತ್ ವೆಂಡಿಂಗ್ ಮಷಿನ್ ಅಳವಡಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್ , ಸದಸ್ಯರಾದ ಪವಿತ್ರ ಲಕ್ಷ್ಮಿಕಾಂತ್, ನಾಗಮ್ಮ, ಪೌರಾಯುಕ್ತ ಡಾ.ಜಯಣ್ಣ, ಪರಿಸರ ವಿಭಾಗದ ಎಇಇ ಸುಬ್ರಮಣಿ, ಸಮೂಹ ಸಂಪನ್ಮೂಲ ಅಧಿಕಾರಿ ನಟರಾಜುಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಪ್ರವೀಣ್ ಹಾಜರಿದ್ದರು.ಪ್ಲಾಸ್ಟಿಕ್ ಮುಕ್ತ ಸ್ವಚ್ಛ ರಾಮನಗರವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದೇವೆ. ಸರ್ಕಾರ ಪ್ಲಾಸ್ಟಿಕ್ ಅನ್ನು ಬ್ಯಾನ್ ಮಾಡಿದ್ದರೂ ಜನರು ಮಾತ್ರ ಬದಲಾಗುತ್ತಿಲ್ಲ. ಹೀಗಾಗಿ ನಗರಸಭೆ ಪರ್ಯಾಯ ಮಾರ್ಗವಾಗಿ ವೆಂಡಿಂಗ್ ಮಷಿನ್ ಪರಿಚಯಿಸಿತ್ತು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಇದನ್ನು ಅಳವಡಿಸಿದ್ದೇವೆ. ವರ್ತಕರು ತಮ್ಮ ಗ್ರಾಹಕರಿಗೆ ಬಟ್ಟೆ ಬ್ಯಾಗ್ ಬಳಸುವಂತೆ ಅರಿವು ಮೂಡಿಸಬೇಕು. ಯಾರಾದರೂ ಪ್ಲಾಸ್ಟಿಕ್ ಬಳಸಿದರೆ ದಂಡ ವಿಧಿಸುವುದು ಮಾತ್ರವಲ್ಲದೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ.
-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ