ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಪಠ್ಯ ಚಟುವಟಿಕೆಗೆ ಸೀಮಿತವಾಗದೆ ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಕಳೆದ 23 ವರ್ಷಗಳಿಂದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಹೇಳಿದರು.ಅವರು ಶನಿವಾರಸಂತೆ ಕಾವೇರಿ ಪ್ರೌಢಶಾಲೆ, ಪ್ರಜ್ವಲ್ ಎಜುಕೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶನಿವಾರಸಂತೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ 2025-26ನೇ ಸಾಲಿನ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳಲ್ಲಿ ಪಠ್ಯಚಟುವಟಿಕೆಗೆ ಹೊರತಾದ ಬಹುಮುಖ ಪ್ರತಿಭೆಗಳಿರುತ್ತದೆ. ಇದನ್ನು ಗುರುತಿಸುವ ಸಲುವಾಗಿ 2001ರಲ್ಲಿ ಆಗಿನ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಮೂಲಕ ಪ್ರತಿವರ್ಷವು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿರುವ ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ನಾನಾ ಪ್ರತಿಭೆಗಳು ಅನಾವರಣಗೊಳ್ಳುತ್ತಿದೆ ಎಂದು ಹೇಳಿದರು.ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರಲು ಕಲೋತ್ಸವ ವಿದ್ಯಾರ್ಥಿಗಳಿಗೆ ಪೂರಕ ವೇದಿಕೆಯಾಗಿದೆ. ಈ ಮೂಲಕ ಮಕ್ಕಳು ತನ್ನ ಪ್ರತಿಭೆಗಳನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಕುರಿತು ಶನಿವಾರಸಂತೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ಮಾತನಾಡಿ, ಇಂದು ಮಕ್ಕಳಿಗೆ ಅನೇಕ ಸೌಲಭ್ಯ ಸವಲತ್ತುಗಳಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ವಿದ್ಯಾಸಂಸ್ಥೆ ಪ್ರಾಂಶುಪಾಲ ದೇವರಾಜ್, ಗ್ರಾಮೀಣ ಭಾಗದ ಮಕ್ಕಳಲ್ಲಿ ನಾನಾ ಸಾಂಸ್ಕೃತಿಕ ಪ್ರತಿಭೆಗಳಿರುತ್ತದೆ. ಈ ದಿಸೆಯಲ್ಲಿ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಆದರೆ ಈ ಕಾರ್ಯಕ್ರಮದಲ್ಲಿ ತೀರ್ಪುಗಾರರು ಮಕ್ಕಳ ಪ್ರತಿಭೆಯನ್ನು ಸಮರ್ಪಕವಾಗಿ ಗುರುತಿಸಿ ತೀರ್ಪು ನೀಡಬೇಕಾಗುತ್ತದೆ. ಸರಿಯಾಗಿ ತೀರ್ಪು ನೀಡದಿದ್ದರೆ ಮಕ್ಕಳ ಪ್ರತಿಭೆ ಕಮರಿ ಹೋಗುತ್ತದೆ. ಈ ನಿಟ್ಟಿನಲ್ಲಿ ತೀರ್ಪುಗಾರರು ಎಚ್ಚರವಹಿಸಿ ನಿಜವಾದ ಪ್ರತಿಭೆಗಳು ಹೊರಹೊಮ್ಮುವ ರೀತಿಯಲ್ಲಿ ತೀರ್ಪು ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್, ಪ್ರಜ್ವಲ್ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಹೂವಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅಶ್ವಥ್, ತಾಲೂಕು ಶಿಕ್ಷರ ಸಂಘದ ಕಾರ್ಯದರ್ಶಿ ಕವಿತಾ, ವಿವಿಧ ಶಾಲಾ ಶಿಕ್ಷಕರಾದ ಮೈಕಲ್ ಸೆಬಾಸ್ಟನ್, ಸುಚಿತ್ರ, ಷಣ್ಮುಖ, ಪುಟ್ಟರಾಜು, ಲಲಿತಾ, ಶಾಂತಮ್ಮ, ಉಲ್ಲಾಸ್, ಜಯಮ್ಮ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಮಧು, ಮುರುಳೀಧರ್ ಮುಂತಾದವರು ಹಾಜರಿದ್ದರು.ಈ ಸಂದರ್ಭ 110 ಮೀಟರ್ ಹರ್ಡಲ್ಸ್ ನಲ್ಲಿ ರಾಷ್ಟ್ರ ಮಟ್ಟದ ಆಯ್ಕೆಯಾದ ಕಾವೇರಿ ಪ್ರೌಢಶಾಲಾ ವಿದ್ಯಾರ್ಥಿ ಅನೀಸ್ ಮತ್ತು ಶನಿವಾರಸಂತೆ ಸಿಆರ್‍ಪಿ ಸಿ.ಕೆ.ದಿನೇಶ್ ಅವರನ್ನು ಸನ್ಮಾನಿಸಲಾಯಿತು