ಸಿಎಂ ಅಭಯ: ಹಿಟ್ನಾಳ ರಾಬಕೊವಿ ಅಧ್ಯಕ್ಷ ?

| Published : Jul 25 2025, 12:32 AM IST

ಸಾರಾಂಶ

ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರೇ ಮೇಲುಗೈ ಸಾಧಿಸಿದ್ದಾರೆ. ಆದರೂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಮಾಜಿ ಶಾಸಕ ಭೀಮಾನಾಯ್ಕ ಅವರ ನಡುವೆಯೇ ಫೈಟ್ ನಡೆದಿದ್ದು, ಇಬ್ಬರು ಸಹ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆ ಒಳಗೊಂಡ ಹಾಲು ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜು. 25ರಂದು ಬೆಳಗ್ಗೆ 11ಕ್ಕೆ ಚುನಾವಣೆ ನಿಗದಿಯಾಗಿದ್ದರೂ ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಕೆಲ ಸಚಿವರು ಅಭಯ ನೀಡಿದ್ದರಿಂದ ಶಾಸಕ ರಾಘವೇಂದ್ರ ಹಿಟ್ನಾಳ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರೇ ಮೇಲುಗೈ ಸಾಧಿಸಿದ್ದಾರೆ. ಆದರೂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಮಾಜಿ ಶಾಸಕ ಭೀಮಾನಾಯ್ಕ ಅವರ ನಡುವೆಯೇ ಫೈಟ್ ನಡೆದಿದ್ದು, ಇಬ್ಬರು ಸಹ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಎರಡ್ಮೂರು ಸಭೆಗಳಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಆಶೀರ್ವಾದ ಸಿಕ್ಕಿದೆ. ಹೀಗಾಗಿಯೇ ಈ ಮೊದಲು ನೇಮಕವಾಗಿದ್ದ ನಾಮನಿರ್ದೇಶಕ ಹುದ್ದೆಯನ್ನು ರದ್ದುಪಡಿಸಿ ರಾಘವೇಂದ್ರ ಹಿಟ್ನಾಳ ಅವರನ್ನು ನೇಮಕ ಮಾಡಿ ಆದೇಶಿಸಿದ್ದರು. ಹೀಗಾಗಿ, ಭೀಮಾನಾಯ್ಕ ಅವರಿಗೆ ಮೇಲ್ನೋಟಕ್ಕೆ ಹಿನ್ನಡೆಯಾದಂತೆ ಆಗಿದೆ. ಆದರೂ ಸಹ ಅವರ ನಡೆ ನಿಗೂಢವಾಗಿಯೇ ಇದ್ದು, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಾರೆಯೇ ಎನ್ನುವ ಕುತೂಹಲ ಇದ್ದೆ ಇದೆ.

ಬಲಾಬಲ:

ರಾಬಕೊವಿ ಹಾಲು ಒಕ್ಕೂಟದಲ್ಲಿ 12 ಚುನಾಯಿತ ನಿರ್ದೇಶಕರು ಇದ್ದಾರೆ. ಓರ್ವರು ನಾಮನಿರ್ದೇಶನ ಸದಸ್ಯರಿದ್ದು, ಅವರೇ ರಾಘವೇಂದ್ರ ಹಿಟ್ನಾಳ. ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಪದನಿಮಿತ್ತ ಮೂವರು ನಿರ್ದೇಶಕರು ಇದ್ದಾರೆ. ಇದಲ್ಲದೆ ಕೇಂದ್ರದ ಎನ್‌ಡಿಡಿಬಿ (ನ್ಯಾಷನಲ್ ಡೈರಿ ಡೆವಲಪ್ ಮೆಂಟ್ ಬೋರ್ಡ್) ಓರ್ವ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಇದೆಲ್ಲವನ್ನು ಒಳಗೊಂಡು 17 ಸದಸ್ಯ ಬಲಹೊಂದಿದೆ. ಎನ್‌ಡಿಡಿಬಿಯಿಂದ ಈ ವರೆಗೂ ರಾಬಕೊವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಭಾಗವಹಿಸಿಲ್ಲ. ಹೀಗಾಗಿ, ಸದ್ಯಕ್ಕೆ 16 ಸದಸ್ಯ ನಡುವೆಯೇ ಚುನಾವಣೆ ನಡೆಯಲಿದೆ.

ಉಪಾಧ್ಯಕ್ಷ ಸ್ಥಾನ:

ಅಧ್ಯಕ್ಷ ಸ್ಥಾನದ ಜತೆಗೆ ಉಪಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದೆ. ಸದ್ಯ ಇರುವ ಮಾಹಿತಿಯ ಪ್ರಕಾರ ಕೊಪ್ಪಳ ತಾಲೂಕಿನ ಕೃಷ್ಣಾರಡ್ಡಿ ಗಲಬಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ನಿಚ್ಚಳವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮೊದಲು ಇವರ ಹೆಸರೇ ಕೇಳಿಬಂದಿತ್ತು. ಆದರೆ, ಸ್ವತಃ ಕೃಷ್ಣಾರಡ್ಡಿ ಗಲಬಿ ಉಪಾಧ್ಯಕ್ಷರಾಗುವುದಕ್ಕೆ ನಿರಾಕರಿಸಿದ್ದಾರೆ. ಹೀಗಾಗಿ, ಗಂಗಾವತಿಯ ಎಂ. ಸತ್ಯನಾರಾಯಣ ಹಾಗೂ ಕುಷ್ಟಗಿಯ ಮಂಜುನಾಥ ನೀಡಶೇಷಿ ಅವರು ಹೆಸರು ಕೇಳಿ ಬಂದಿವೆ.

ಪಕ್ಷದ ನಾಯಕರು ಮತ್ತು ಸಿಎಂ ಸಿದ್ದರಾಮಯ್ಯ ಅವರು ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಿ ಕೈಗೆ ಜವಾಬ್ದಾರಿ ನೀಡಿದ್ದು, ಅವರ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ಕೊಪ್ಪಳ ಜಿಲ್ಲೆಗೆ ಅಧ್ಯಕ್ಷ ಸ್ಥಾನ, ರಾಯಚೂರು ಜಿಲ್ಲೆಗೆ ಉಪಾಧ್ಯಕ್ಷ ಸ್ಥಾನ ಹಾಗೂ ವಿಜಯನಗರ ಜಿಲ್ಲೆಗೆ ಕೆಎಂಎಫ್ ಡೆಲಿಗೆಟ್ಸ್ ಸ್ಥಾನವನ್ನು ಹಂಚಿಕೆ ಮಾಡಲಾಗಿದ್ದು, ಇದಕ್ಕೆ ನನ್ನ ಸಮ್ಮತಿ ಇದೆ. ಉಳಿದಂತೆ ಫಲಿತಾಂಶದ ಬಳಿಕ ನಾನು ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ಭೀಮಾನಾಯ್ಕ ಹೇಳಿದರು. ಸದ್ಯಕ್ಕೆ ನಿರ್ದೇಶಕರಲ್ಲಿ ಬಹುತೇಕರು ಬೆಂಬಲಿಸಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಗೆಲ್ಲುವ ವಿಶ್ವಾಸವೂ ಇದೆ. ಅವಿರೋಧವೂ ಆಗುವ ಸಾಧ್ಯತೆ ಇದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.