ಕಾರ್ಕಳ: ರಾಜ್ಯದಲ್ಲಿ ಆನೆ, ಹುಲಿ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಜನ ವಸತಿ ಪ್ರದೇಶಗಳಿಗೆ ಪ್ರಾಣಿಗಳು ಪ್ರವೇಶ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕಾಡಿನ ಅಂಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೇಡ್ ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಈ ಸಮಸ್ಯೆಗೆ ಬ್ಯಾರಿಕೇಡ್ ನಿರ್ಮಾಣವೇ ಪ್ರಮುಖ ಪರಿಹಾರವಾಗಿದ್ದು, ಜೊತೆಗೆ ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಘೋಷಿಸಿದರು.

ರಾಜ್ಯದಲ್ಲಿ ಗಾಂಜಾ ಮತ್ತು ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ಕುರಿತು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಘಟನೆಗಳನ್ನು ಉಲ್ಲೇಖಿಸಿದ ಸಿಎಂ, ಡ್ರಗ್ಸ್ ಸಮಸ್ಯೆಯನ್ನು ಸಂಪೂರ್ಣ ಶೂನ್ಯ ಮಟ್ಟಕ್ಕೆ ತರುವುದು ಸರ್ಕಾರದ ಗುರಿಯಾಗಿದೆ ಎಂದರು. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಈ ಪ್ರಯತ್ನ ಇನ್ನೂ ಸಂಪೂರ್ಣ ಸಫಲವಾಗಿಲ್ಲ ಎಂಬುದನ್ನೂ ಒಪ್ಪಿಕೊಂಡರು.

ಅಜೀಮ್ ಪ್ರೇಮ್‌ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ಯಕರ್ತರಿಂದ ನಡೆದ ದಾಳಿ ಪ್ರಕರಣದ ಕುರಿತು ಮಾತನಾಡಿದ ಸಿಎಂ, ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ. ಎಬಿವಿಪಿ ಅಥವಾ ಬೇರೆ ಯಾವುದೇ ಸಂಘಟನೆಗಳಾದರೂ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿನಾಕಾರಣ ಗಲಾಟೆ ಸೃಷ್ಟಿಸುವವರನ್ನು ಸಹಿಸಲಾಗುವುದಿಲ್ಲ ಎಂದರು.

ಗ್ಯಾರಂಟಿ ಇದ್ದೇ ಇರುತ್ತದೆ.

ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಭಾರವಾಗಿವೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವರ್ಷಕ್ಕೆ ಸುಮಾರು 52 ಸಾವಿರ ಕೋಟಿ ರು. ಗೂ ಹೆಚ್ಚು ಹಣ ಬೇಕಾಗುತ್ತದೆ. ಅದನ್ನು ಭಾರವೆಂದು ಹೇಳಿರಬಹುದು. ಆದರೆ ಸರ್ಕಾರ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆ ಎರಡನ್ನೂ ಸಮಾನವಾಗಿ ಮುಂದುವರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.


ಆಗುಂಬೆ ಸುರಂಗ ಮಾರ್ಗ ಮಾಡುತ್ತೇವೆ: ಆಗುಂಬೆ ಸುರಂಗ ಮಾರ್ಗ ಯೋಜನೆ ಕುರಿತು ಮಾತನಾಡಿದ ಸಿಎಂ, ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ ಎಂದು ತಿಳಿಸಿದರು. ಪರಿಸರವಾದಿಗಳ ಆತಂಕಗಳನ್ನು ಮನವರಿಕೆ ಮಾಡಿಕೊಂಡು ಅವರೊಂದಿಗೆ ಸಂವಾದ ನಡೆಸಲಾಗುವುದು. ಅವರ ವಿರೋಧದ ಕಾರಣಗಳನ್ನು ತಿಳಿದು ಸಮನ್ವಯದಿಂದ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಅದೇ ರೀತಿ ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೊದಲ ಬಾರಿಯ ಶಾಸಕರಿಗೆ ಮಂತ್ರಿಗಿರಿ ಇಲ್ಲ: ಪ್ರಥಮ ಬಾರಿ ಶಾಸಕರಾದವರು ಮಂತ್ರಿಯಾಗಬೇಕು ಎಂದು ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಸೆ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಮೊದಲ ಬಾರಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಬಾರದು ಎಂಬ ನಿರ್ಣಯ ಕೈಗೊಂಡಿದ್ದೇವೆ ಎಂದು ಹೇಳಿದರು. ಹೈಕಮಾಂಡ್ ಸೂಚನೆಗಳನ್ನು ಪಾಲಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಆಸ್ಪತ್ರೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲ.

ಸರ್ಕಾರಿ ಹುದ್ದೆ ಭರ್ತಿ: ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಧರಣಿ ಕುರಿತು ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ನೀಡುವುದು ಸರ್ಕಾರದ ಭರವಸೆ ಎಂದರು. ಒಳ ಮೀಸಲಾತಿ ಕಾರಣದಿಂದ ಪ್ರಕ್ರಿಯೆ ವಿಳಂಬವಾಗಿತ್ತು. ಇದೀಗ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು. ರಾಜ್ಯದಲ್ಲಿ ಸುಮಾರು ಎರಡುವರೆ ಲಕ್ಷ ಖಾಲಿ ಹುದ್ದೆಗಳಿದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ನರ್ಸಿಂಗ್ ಕಾಲೇಜು ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳ ಅಹವಾಲನ್ನು ಸ್ವೀಕರಿಸಿದರು ಬಗೆಹರಿಸುವ ಬಗ್ಗೆ ಭರವಸೆ ನೀಡಿದರು.