ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿರುವರು. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಉಪಸ್ಥಿತರಿರುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಅ.೩೧ರಂದು ಮಂಡ್ಯ ನಗರಕ್ಕೆ ಆಗಮಿಸುತ್ತಿದ್ದಾರೆ. ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬೆಳಗ್ಗೆ ೧೦ ಗಂಟೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಲ್ಲಿ ₹೧೭೯೩.೭೪ ಕೋಟಿ ವೆಚ್ಚದ ೫೭ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಜೊತೆಗೆ ಫಲಾನುಭವಿಗಳಿಗೆ ಸವಲತ್ತು ವಿತರಿಸಲಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿರುವರು. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಉಪಸ್ಥಿತರಿರುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಚಿವರಾದ ಕೆ.ಜೆ.ಜಾರ್ಜ್, ಕೆ.ಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಬಸವರಾಜ ರಾಯರೆಡ್ಡಿ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಡಾ.ಯತೀಂದ್ರ ಸಿದ್ದರಾಮಯ್ಯ, ರುದ್ರಪ್ಪ ಮಾನಪ್ಪ ಲಮಾಣಿ, ಮಧು ಬಂಗಾರಪ್ಪ, ಎಚ್.ಸಿ.ಬಾಲಕೃಷ್ಣ, ವಿಧಾನಸಭೆ ಮತ್ತು ವಿಧಾನಪರಿಷತ್ ಶಾಸಕರು ಭಾಗವಹಿಸುವರು.

ಆಹ್ವಾನಿತರಾಗಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್. ನಂದಿನಿ, ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಆಗಮಿಸಲಿದ್ದಾರೆ.

ನಗರದೆಲ್ಲೆಡೆ ಫ್ಲೆಕ್ಸ್, ಕಟೌಟ್‌ಗಳು:

ಮುಖ್ಯಮಂತ್ರಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರ ಫ್ಲೆಕ್ಸ್ ಭರಾಟೆ ಹೆಚ್ಚಾಗಿದೆ. ಮಹಾವೀರ ವೃತ್ತ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಪಿಇಎಸ್ ಇಂಜಿನಿಯರಿಂಗ್ ಕಾಲೇಜು ರಸ್ತೆ, ನೂರಡಿ ರಸ್ತೆಯುದ್ದಕ್ಕೂ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಹೆದ್ದಾರಿಯುದ್ದಕ್ಕೂ ಫ್ಲೆಕ್ಸ್‌ಗಳು ಆವರಿಸಿಕೊಂಡಿದ್ದು, ಎತ್ತ ತಿರುಗಿದರೂ ಸಚಿವರು, ಶಾಸಕರಿರುವ ಭಾವಚಿತ್ರದ ಫ್ಲೆಕ್ಸ್‌ಗಳು ಕಾಣಿಸುತ್ತಿವೆ.

ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸುಮಾರು ೫೦ ಸಾವಿರದಿಂದ ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಜಿಲ್ಲೆಯ ಎಲ್ಲಾ ಕಡೆಯಿಂದ ಜನರನ್ನು ಕರೆತರುವುದಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ.

ಕಾಂಗ್ರೆಸ್‌ ಕಚೇರಿಗೆ ಶಂಕುಸ್ಥಾಪನೆ:

ಮಂಡ್ಯದ ಕೆರೆಯಂಗಳದಲ್ಲಿ ನೂತನವಾಗಿ ನಿರ್ಮಿಸಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುದ್ದಲಿ ಪೂಜೆ ನೆರವೇರಿಸುವರು. ಸುಮಾರು ₹5 ಕೋಟಿ ವೆಚ್ಚದಲ್ಲಿ ಕಾಂಗ್ರೆಸ್‌ ಕಚೇರಿ ನಿರ್ಮಾಣಗೊಳ್ಳಲಿದೆ. ಅಲ್ಲಿಯೂ ವೇದಿಕೆ ನಿರ್ಮಾಣ, ಶಾಮಿಯಾನ ಹಾಕಲಾಗಿದೆ.