ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ ಎಂದ ಮಾತ್ರಕ್ಕೆ ಎಲ್ಲವೂ ದೊರಕುತ್ತದೆ ಎನ್ನುವುದು ನನ್ನ ಭಾವನೆಯಲ್ಲ. ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರವೇ ಅಂತಿಮ. ಈ ಬಗ್ಗೆ ಏನು ಮಾಡುತ್ತಿದೆ ಎನ್ನುವುದನ್ನು ಕಾದು ನೋಡೋಣ .

ಕನ್ನಡಪ್ರಭ ವಾರ್ತೆ ಮದ್ದೂರು

ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ತಾಲೂಕಿನ ಕುದರಗುಂಡಿ ಗ್ರಾಮ ದ ಬಳಿ ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ತೈಲೂರು ಚೆಲುವರಾಜು. ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ನಾಗೇಶ್ ಅವರುಗಳಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ ಎಂದ ಮಾತ್ರಕ್ಕೆ ಎಲ್ಲವೂ ದೊರಕುತ್ತದೆ ಎನ್ನುವುದು ನನ್ನ ಭಾವನೆಯಲ್ಲ. ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರವೇ ಅಂತಿಮ. ಈ ಬಗ್ಗೆ ಏನು ಮಾಡುತ್ತಿದೆ ಎನ್ನುವುದನ್ನು ಕಾದು ನೋಡೋಣ ಎಂದು ಸಚಿವರು ಸೂಕ್ತ ಉತ್ತರ ನೀಡದೆ ಜಾರಿಕೊಂಡರು.

ಮಂಡ್ಯ ನಗರದ ಮಿಮ್ಸ್ ಹೆರಿಗೆ ಆಸ್ಪತ್ರೆಯನ್ನು ಮತ್ತಷ್ಟು ಮೂಲ ಸೌಲಭ್ಯಗಳೊಂದಿಗೆ ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರೋಗಿಗಳ ಸಂಬಂಧಿಕರಿಗೆ ಆಸನದ ವ್ಯವಸ್ಥೆ, ಮೂಲ ಸೌಲಭ್ಯಗಳ ಕೊರತೆ ನಿವಾರಣೆ ಸೇರಿದಂತೆ ಅಭಿವೃದ್ಧಿಗೆ ಇನ್ನು ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಕೆ.ಪಿ.ಶ್ರೀಧರ ಮತ್ತಿತರರು ಇದ್ದರು.