ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಮಾಧ್ಯಮಗಳ ಎದುರು ಮಾತನಾಡುವವರು ಕೇವಲ ಹತ್ತೆ ಹತ್ತು ಜನ ಶಾಸಕರು ಇದ್ದಾರೆ. ಇದರಲ್ಲಿ ಈ ಕಡೆ(ಸಿಎಂ) ಐದು ಶಾಸಕರು, ಆ ಕಡೆ(ಡಿಸಿಎಂ) ಐದು ಶಾಸಕರು ಇದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಮಾಧ್ಯಮಗಳ ಎದುರು ಮಾತನಾಡುವವರು ಕೇವಲ ಹತ್ತೆ ಹತ್ತು ಜನ ಶಾಸಕರು ಇದ್ದಾರೆ. ಇದರಲ್ಲಿ ಈ ಕಡೆ(ಸಿಎಂ) ಐದು ಶಾಸಕರು, ಆ ಕಡೆ(ಡಿಸಿಎಂ) ಐದು ಶಾಸಕರು ಇದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಆ ಹತ್ತು ಜನ ಎಂಎಲ್ಎಗಳು ಮೈಕ್ ಸಿಕ್ಕ ತಕ್ಷಣ ಏನೋ ಒಂದು ಹೇಳಿ ಬಿಡುತ್ತಾರೆ. ಇದರಿಂದ ಎಲ್ಲ ಗೊಂದಲ ಸೃಷ್ಟಿಯಾಗಿದ್ದು, ಇದನ್ನು ಇಲ್ಲ ಎಂದು ನಾನು ಹೇಳುವುದಿಲ್ಲ. ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು. ಸಿಎಂ, ಡಿಸಿಎಂ ಸೇರಿ ಅವರೆಲ್ಲರೂ ಏನು ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.

ಗುಜರಾತ್ ರಾಜ್ಯದಲ್ಲಿ ಇದ್ದ ವಾಹನಗಳಿಗೆ ಆರ್‌ಟಿಒ ಕಚೇರಿಯಿಂದ ಯಾವುದೇ ಸ್ಥಳ ಪರಿಶೀಲನೆ ಇಲ್ಲದೇ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ನಮ್ಮ ಆರ್‌ಟಿಒಗಳು ತಪ್ಪು ಮಾಡಿದ್ದರೆ ಇಂದೇ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗುವುದು. ಆಲ್ ಇಂಡಿಯಾ ಪರ್ಮಿಟ್ ಎಲ್ಲಿಂದಾದರೂ ಮಾಡಬಹುದು. ಕೇಂದ್ರ ಸರ್ಕಾರ ಆ ರೀತಿ ಮಾಡಿದೆ. ಆದರೆ, ವಾಹನ ಬಂದಿರಲೇಬೇಕು. ವಾಹನ ಬರದೇ ಪ್ರಮಾಣ ಪತ್ರ ಕೊಟ್ಟರೆ ಅದು ತಪ್ಪಾಗುತ್ತದೆ ಎಂದು ತಿಳಿಸಿದರು.

ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಗುಜರಾತ್ ಕಮಿಷನರ್ ನಮ್ಮ ಕಮಿಷನರ್‌ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ವರದಿ ಕೊಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ನಮ್ಮ ಕಮಿಷನರ್ ಶೋಭಾ ಎನ್ನುವವರು ತನಿಖೆ ಮಾಡುತ್ತಿದ್ದಾರೆ. ಅದೇನಾದರೂ ನಮ್ಮ ಅಕಾರಿಗಳು ತಪ್ಪು ಮಾಡಿದ್ದರೆ ಕೂಡಲೇ ಸಸ್ಪೆಂಡ್ ಮಾಡಲು ಸೂಚಿಸಿದ್ದೇನೆ ಎಂದರು.

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಬಿ.ತಿಮ್ಮಾಪುರಗೆ ದಾಖಲೆಗಳನ್ನು ಕೊಟ್ಟರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತಾರೆ. ಭ್ರಷ್ಟಾಚಾರದಲ್ಲಿ ಸಚಿವರು ಭಾಗಿಯಾಗಿರುವ ಬಗ್ಗೆ ದಾಖಲೆ ಇದ್ದರೆ ಲೋಕಾಯುಕ್ತರಿಗೆ ಕೊಡಲಿ. ಇಲ್ಲವೇ ರಾಜ್ಯಪಾಲರಿಗೆ ಕೊಡಲಿ. ಅಥವಾ ನಮ್ಮ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿ. ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.