ಹಿರಿಯೂರಿಗೆ ಸಿಎಂ ಭೇಟಿ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಮಾಡಿದರು.

ಪ್ರಜಾಸೇವಾ ಆಂದೋಲನ ಸಭೆ । ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಮಾಹಿತಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನ.21ರಂದು ಶನಿವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಹಿರಿಯೂರಿನಲ್ಲಿ ಪ್ರಜಾಸೇವಾ ಆಂದೋಲನ ಸಭೆ ಜರುಗಲಿದೆ. ಇದಕ್ಕೂ ಮುನ್ನವೇ ಅರ್ಜಿ ನಮೂನೆಗಳನ್ನು ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಹಂಚಿಕೆ ಮಾಡಿ, ಸ್ವೀಕೃತವಾಗುವ ಅರ್ಜಿಗಳ ವಿಲೇವಾರಿ ಪ್ರಯತ್ನಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಸೂಚಿಸಿದರು.

ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಹಿರಿಯೂರು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಪ್ರಜಾಸೇವಾ ಆಂದೋಲನ ಹಮ್ಮಿಕೊಂಡಿರುವ ಕುರಿತು, ಡಂಗೂರ ಸಾರುವ ಮೂಲಕ ಜನರಗೆ ಪ್ರಚುರ ಪಡಿಸಬೇಕು. ಈ ಹಿಂದೆ ಹಿರಿಯೂರಿನಲ್ಲಿ ಸೆ.5ರಂದು ಪ್ರಜಾಸೇವಾ ಆಂದೋಲನೆ ಚಾಲನೆ ನೀಡುವುದರೊಂದಿಗೆ, ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಹೀಗೆ ಸ್ವೀಕೃತವಾಗಿದ್ದ ಅರ್ಜಿಗಳ ಪೈಕಿ ಎಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಯಾವ ಅರ್ಜಿಗಳ ವಿಲೇವಾರಿ ತಡವಾಗಿದೆ. ಅದಕ್ಕೆ ಕಾರಣವೇನು ಎಂಬುದನ್ನು ಪಟ್ಟಿ ಮಾಡಿ ಮಾಹಿತಿ ಒದಗಿಸಬೇಕು. ಈಗಾಗಲೇ ಪ್ರಜಾಸೇವಾ ಆಂದೋಲನ ಸೇರಿದಂತೆ, ಐಪಿಜಿಆರ್ ಎಸ್ ಪೋರ್ಟ್ಲ್‌ನಲ್ಲಿ ಸ್ವೀಕೃತವಾಗಿರುವ ಅರ್ಜಿಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಹಂತದಲ್ಲೇ ಪರಿಹಾರ ಒದಗಬಹುದಾದರೆ, ಕೂಡಲೇ ಅಧಿಕಾರಿಗಳು ಸ್ಪಂದಿಸಿ ಜನರ ಕೆಲಸ ಮಾಡಿಕೊಡಬೇಕು.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗುವ ಪ್ರಜಾಸೇವಾ ಆಂದೋಲನದ ಹಿನ್ನಲೆಯಲ್ಲಿ ಹಿರಿಯೂರು ತಾಲೂಕಿನ ಎಲ್ಲ ಗ್ರಾಮ ಹಾಗೂ ನಗರ ಪ್ರದೇಶದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ, ಅರ್ಜಿಗಳನ್ನು ವಿತರಿಸಿ, ಮರಳಿ ಅರ್ಜಿಗಳನ್ನು ಸ್ವೀಕರಿಸುವ ಕೆಲಸವಾಗಬೇಕು. ವೇದಿಕೆ ಕಾರ್ಯಕ್ರಮದ ಸ್ಥಳದಲ್ಲಿ ಸಾರ್ವಜನಿಕರಿಗೆ ನೆರಳು ಹಾಗೂ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು. ಸ್ಥಳದಲ್ಲಿ ಇಲಾಖೆವಾರು ಕೌಂಟರ್ ತೆರೆಯಬೇಕು. ಬರಗಾಲದ ಹಿನ್ನಲೆಯಲ್ಲಿ ಸಾಕಷ್ಟು ಜನರು ಕುಡಿಯುವ ನೀರಿನ ಸಮಸ್ಯೆ ಹೊತ್ತು ಬರುತ್ತಾರೆ. ಇದರೊಂದಿಗೆ ಕಂದಾಯ ಇಲಾಖೆಗೆ ಸಂಬAಧಿಸಿದ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಅಧಿಕಾರಿಗಳು ಇದಕ್ಕೆ ಸಿದ್ದರಿದ್ದು, ತತಕ್ಷಣವೇ ಪರಿಹಾರ ನೀಡಬೇಕು ಎಂದು ಸಚಿವ ಟಿ.ರಘುಮೂರ್ತಿ ಸೂಚಿಸಿದರು.

ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿಪಂ ಸಿಇಒ ಡಾ.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ ಕಾಂತರಾಜ್, ಜಿ.ಪಂ.ಉಪಕಾರ್ಯದರ್ಶಿ ಬಾಬು, ಸಿಪಿಒ ಗಾಯಿತ್ರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಹಿರಿಯೂರು ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.