ಸಾರಾಂಶ
ನೆಲಮಂಗಲ: ಗ್ಯಾರಂಟಿ ಯೋಜನೆಗಳ ಜತೆ ನನ್ನ ಕ್ಷೇತ್ರಕ್ಕೆ ಕೇವಲ 9 ತಿಂಗಳಲ್ಲಿ ಸರಕಾರ ನೀಡಿರುವ 869 ಕೋಟಿ ಅನುದಾನದ ವಿವಿಧ ಯೋಜನೆಗಳ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಮಾ.4ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಕ್ಷೇತ್ರದ ಬೊಮ್ಮನಹಳ್ಳಿಯಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು 276 ಕೋಟಿ ಅನುದಾನದಲ್ಲಿ 220 ಕೆವಿ ವಿದ್ಯುತ್ ಉಪಶಾಖೆ, 485 ಕೋಟಿ ಅನುದಾನದ 60ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ವೃಷಭಾವತಿ ಯೋಜನೆ ಶಂಕುಸ್ಥಾಪನೆ, ವಿಶೇಷ ಅನುದಾನದಲ್ಲಿ 2500 ಬಡವರಿಗೆ ಮನೆಗಳ ಮಂಜೂರು, 60 ಕೋಟಿ ಅನುದಾನದಲ್ಲಿ ಸೊಂಡೆಕೊಪ್ಪ ಬೈಪಾಸ್‌ನಿಂದ ತಾವರೆಕೆರೆ ರಸ್ತೆಯ 3 ಕಿ.ಮೀ. ಹಾಗೂ ತ್ಯಾಮಗೊಂಡ್ಲು ಟಿ.ಬೇಗೂರು ರಸ್ತೆಯನ್ನು 4 ಪಥಗಳ ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳಿಗೆ ಸಿಎಂ, ಡಿಸಿಎಂ ಚಾಲನೆ ನೀಡಲಿದ್ದಾರೆ.ಕ್ಷೇತ್ರಕ್ಕೆ ಜನರ ಸೇವೆಗಾಗಿ ನಿರಂತರ ಓಡಾಟ:
ನನ್ನನ್ನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದ ಜನರ ಋಣ ತೀರಿಸುವುದು ನನ್ನ ಕರ್ತವ್ಯ. ಅದಕ್ಕೆ ಕ್ಷೇತ್ರ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ನೇರವಾಗಿ ಕಂಡು ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ತಂದಿದ್ದೇನೆ. ಮೊದಲ ಹಂತದಲ್ಲಿ 869 ಕೋಟಿ ಅನುದಾನದ ಕಾಮಗಾರಿಗಳು ಶಂಕುಸ್ಥಾಪನೆ ಆಗುತ್ತಿದ್ದು 2ನೇ ಹಂತದಲ್ಲಿ ತಾಲೂಕು ಆಸ್ಪತ್ರೆ, ಒಳಚರಂಡಿ, ಕಾವೇರಿ ನೀರಿನ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.2ನೇ ಹಂತದಲ್ಲಿ: 100 ಬೆಡ್ ತಾಲೂಕು ಆಸ್ಪತ್ರೆ, ನಗರಸಭೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿ, ಉಪನಗರ, ಕಾವೇರಿ ನೀರು ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 2ನೇ ಹಂತದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಯೋಜನೆಗಳು ಈಗಗಾಲೇ ಅನುಮೋದನೆ, ಟೆಂಡರ್‌ಗಾಗಿ ಕಾರ್ಯರೂಪದಲ್ಲಿವೆ.
ಕ್ಷೇತ್ರದ 45,805 ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 9.16 ಕೋಟಿ ಹಣ ನೇರವಾಗಿ ಸರಕಾರ ತಲುಪಿಸಿದೆ. ಸೋಲೂರು ಹೊರತು ಪಡಿಸಿ 80987 ಮನೆಗಳಿಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಬಸ್ ಸೌಲಭ್ಯ, ಯುವ ನಿಧಿ ಸೇರಿದಂತೆ ನೂರಾರು ಕೋಟಿ ಅನುದಾನ ತಾಲೂಕಿನ ಜನರಿಗೆ ತಲುಪಿದೆ ಎಂದರು.ಬಿಜೆಪಿ ಮುಖಂಡರಿಗೆ ಟಾಂಗ್: ನಾನು ಚುನಾವಣೆಯಲ್ಲಿ 6.5 ಕೋಟಿ ಆಸ್ತಿ ಘೋಷಣೆ ಮಾಡಿದ್ದೇನೆ. ಆದರೆ ಬಿಜೆಪಿಯಲ್ಲಿ ಚುನಾವಣೆಯಲ್ಲಿ ನಿಂತಿದ್ದ ಸಪ್ತಗಿರಿ ಶಂಕರ್ ನಾಯಕ್ ಸುಳ್ಳಿನ ಭಾಷಣ ಮಾಡಿದ್ದಾರೆ. ಬಡ ಮೇಷ್ಟ್ರ ಮಗ 400 ಕೋಟಿ ಘೋಷಣೆ ಮಾಡಿದ್ದು ಹೇಗೆಂದು ಕೇಳಿದ್ದಾರೆ. ಈತ ಮಾಜಿ ಸಚಿವರ ಮಗನಾಗಿ ದಾಖಲೆಗಳನ್ನು ನೋಡದೆ ಸುಳ್ಳು ಹೇಳುವುದು ಸರಿಯಲ್ಲ. ನಾನು ಚುನಾವಣೆಯಲ್ಲಿ ಘೋಷಣೆ ಮಾಡಿರುವ ಆಸ್ತಿಗೆ ಲೆಕ್ಕ ಕೊಡುತ್ತೇನೆ ಎಂದರು.
ಮಾಜಿ ಶಾಸಕರಿಗೆ ತಿರುಗೇಟು: 10 ವರ್ಷಗಳ ಕಾಲ ಅಧಿಕಾರ ಅನುಭವಿಸಿ 14 ತಿಂಗಳು ಸರಕಾರವಿದ್ದರೂ ಕ್ಷೇತ್ರಕ್ಕೆ ಒಂದು ವಿಶೇಷ ಅನುದಾನ ತರದ ಮಾಜಿ ಶಾಸಕ ಶ್ರೀನಿವಾಸಮೂರ್ತಿಯವರು ನಮ್ಮನ್ನು ಟೀಕಿಸುತ್ತಾರೆ. ನಾನು ತಂದಿರುವ ಶಾಶ್ವತ ಯೋಜನೆಯ ವಿಶೇಷ ಒಂದು ಅನುದಾನದ ರೀತಿ ಅವರು ತಂದಿರುವ ಬಗ್ಗೆ ಒಂದು ದಾಖಲೆ ನೀಡಿದರೂ ನಾನು ರಾಜಿನಾಮೆ ನೀಡುತ್ತೇನೆ. ಅವರ ಭ್ರಷ್ಟಾಚಾರ, ಅಧಿಕಾರಿಗಳ ಬಳಿ ವಸೂಲಿ, ಕಾರ್ಯಕರ್ತರು, ಮುಖಂಡರಿಂದ ಕಾಮಗಾರಿಗಳಲ್ಲಿ ಕಮಿಷನ್ ವಸೂಲಿ ಬಗ್ಗೆ ಜನರು ಹಾಗೂ ಅವರ ಮುಖಂಡರೇ ನಮಗೆ ಮಾಹಿತಿ ನೀಡಿದ್ದಾರೆ. ತಮ್ಮ ಜಾತಿಗೆ ಮೋಸ ಮಾಡಿ ಕೆಲಸ ಪಡೆದು 420 ಕೇಸು ದಾಖಲು ಮಾಡಿಕೊಂಡಿರುವವರು ನಮ ಬಗ್ಗೆ ಟೀಕೆ ಮಾಡುತ್ತಾರೆ. ಯಾವುದೇ ಒಂದು ಪೇಪರ್ ಹಿಡಿದು ಮಾತನಾಡಿದರೆ ಜನರೇ ಉತ್ತರ ನೀಡುತ್ತಾರೆ ಎಂದು ಮಾಜಿ ಶಾಸಕರಿಗೆ ತಿರುಗೇಟು ನೀಡಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.ಪೋಟೋ-1ಕೆ ಎನ್ ಎಲ್ ಎಮ್ 1: ನೆಲಮಂಗಲದಲ್ಲಿ ಶಾಸಕ ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.