ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿವೃದ್ಧಿಗಾಗಿ ಕಿತ್ತಾಡಿದ್ದರೆ ಜನರು ಮೆಚ್ಚಿಕೊಳ್ಳುತ್ತಿದ್ದರು. ಆದರೆ ಇವರು ತಮ್ಮ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿವೃದ್ಧಿಗಾಗಿ ಕಿತ್ತಾಡಿದ್ದರೆ ಜನರು ಮೆಚ್ಚಿಕೊಳ್ಳುತ್ತಿದ್ದರು. ಆದರೆ ಇವರು ತಮ್ಮ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಟೀಕಿಸಿದ್ದಾರೆ.ಮಡಿಕೇರಿ ತಾಲೂಕಿನ ಮಕ್ಕಂದೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದ ಹಂಚಿಕೆ ಒಪ್ಪಂದ ಆಗಿದೆಯೋ, ಬಿಟ್ಟಿದೆಯೋ ಅದನ್ನು ದೇವರೇ ಬಲ್ಲ.ಹೈಕಮಾಂಡ್ ಕೂಡ ಮೌನ ವಹಿಸಿದೆ. ನೀವು ಯಾರಾದರೂ ಮುಖ್ಯಮಂತ್ರಿ ಆಗಿ. ಆದರೆ ರಾಜ್ಯದ ಜನರಿಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿ ಎಂದು ಆಗ್ರಹಿಸಿದರು.
ಬೆಂಗಳೂರಿನ ಸ್ಥಿತಿ ಏನಾಗಿದೆ? ಸ್ವಚ್ಛ ನಗರ ಸಿಲಿಕಾನ್ ಸಿಟಿ ಕಸದಿಂದ ತುಂಬಿ ಹೋಗಿದೆ. ರಸ್ತೆಗಳು ಗುಂಡಿ ಬಿದ್ದು ಹೋಗಿವೆ. ಸಾಕಷ್ಟು ಉದ್ಯೋಗ ಕೊಡುವಂತಹ ದೊಡ್ಡ ದೊಡ್ಡ ಕಂಪನಿಗಳು ಬೆಂಗಳೂರು ಬಿಟ್ಟು ಹೋಗುತ್ತಿವೆ ಎಂದು ಹೇಳಿದರು.ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ವರ್ಷದಲ್ಲಿ ಖಾಲಿ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ ಎಂದಿದ್ದರು. 2.70 ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದಿದ್ದರು. ಒಂದು ಹುದ್ದೆಯನ್ನೂ ಭರ್ತಿ ಮಾಡಿಲ್ಲ. ರಾಜ್ಯದಲ್ಲಿ ಉದ್ಯೋಗಕ್ಕಾಗಿ ಯುವ ಜನರು ಹೋರಾಟ ನಡೆಸುತ್ತಿದ್ದಾರೆ.
ಕಬ್ಬು, ಮೆಕ್ಕೆಜೋಳ ಹೋರಾಟಗಾರ ಸಮಸ್ಯೆ ಬಗೆಹರಿಸಿಲ್ಲ. ಗೃಹಲಕ್ಷ್ಮಿ ಯೋಜನೆ ಎಲೆಕ್ಷನ್ ಲಕ್ಷ್ಮಿ ಆಗಿದೆ. ಚುನಾವಣೆ ಬಂದಾಗ ಮಾತ್ರ ಹಣ ಹಾಕಲಾಗುತ್ತಿದೆ. ಎರಡು ತಿಂಗಳ ಹಣ ಹಾಕದೆ ಸಚಿವರು ಸದನಕ್ಕೆ ಸುಳ್ಳು ಮಾಹಿತಿ ನೀಡಿದರು ಎಂದು ರವಿಕುಮಾರ್ ಆರೋಪಿಸಿದರು.ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದೆಲ್ಲದರ ಮಧ್ಯೆ ಇವರದು ಬರೀ ಕುರ್ಚಿಗಾಗಿ ಗುದ್ದಾಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನ ಅರಮನೆ ಆವರಣದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಬಲೂನಿಗೆ ನೈಟ್ರೋಜನ್ ತುಂಬಿ ಮಾರಾಟ ಸಂದರ್ಭ ಸ್ಫೋಟ ಎಂದು ಹೇಳಲಾಗುತ್ತಿದೆ. ಆದರೆ ಅದು ನಿಜವಾಗಿಯೂ ಏನು ಎನ್ನುವುದು ತನಿಖೆಯಾಗಲಿ ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪೊಲೀಸರೇ ದರೋಡೆಗೆ ಇಳಿದಿದ್ದಾರೆ. ಇದೊಂದತರ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ಕರ್ನಾಟಕದಲ್ಲಿ ಆಡಳಿತ, ಅಭಿವೃದ್ಧಿ ಎನ್ನುವುದು ಶೂನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಫೋಟದಲ್ಲಿ ಮೃತಪಟ್ಟ ಉತ್ತರ ಪ್ರದೇಶವನು ಅಮಾಯಕ ಎಂಬ ಸಚಿವ ಮಹದೇವಪ್ಪ ಹೇಳಿಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬಾಂಬ್ ಸ್ಫೋಟ ಮಾಡಿದವರು. ಗಲಭೆ ಮಾಡಿದವರು ಇವರೆಲ್ಲಾ ಬ್ರದರ್ಸ್ ಆಗಬೇಕು ಎಂದು ಡಿಸಿಎಂ ಡಿಕೆಶಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ವ್ಯಂಗ್ಯವಾಡಿದರು.
ಬಾಂಬ್ ಸ್ಫೋಟಿಸಿದವರು, ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದವರ ಮೇಲಿನ ಕೇಸನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ. ಇದನ್ನೆಲ್ಲ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಜನರ ದೃಷ್ಟಿಯಿಂದ ಇದು ಬಹಳ ಒಳ್ಳೆಯ ಸರ್ಕಾರವೆಂದು ವ್ಯಂಗ್ಯವಾಡಿದರು.ಮೈಸೂರಿನಲ್ಲಿ ಸ್ಫೋಟ ಆಗಿರುವುದು ಸಂಪೂರ್ಣ ಭದ್ರತಾ ವೈಫಲ್ಯ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಡ್ರಗ್ಸ್ ಎಲ್ಲೆಂದರಲ್ಲಿ ತುಂಬಿ ತುಳುಕುತ್ತಿದೆ ಎಂದರು.