ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಸಿಎಂ, ಡಿಸಿಎಂ ಭಾಗಿ: ಜೋಶಿ ಆರೋಪ

| Published : Jul 14 2024, 01:32 AM IST

ಸಾರಾಂಶ

ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾಗಿಯಾಗಿದ್ದು ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ನಡೆದಿವೆ. ಮುಖ್ಯಮಂತ್ರಿಗಳು ಇದೇ ರೀತಿ ಈ ಹಿಂದೆಯೂ ಹಣ ಸಂಗ್ರಹಿ ತೆಲಂಗಾಣಕ್ಕೆ ಕಳಿಸಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

ಧಾರವಾಡ:

ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಹ ಭಾಗಿಯಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆದಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಮುಖ್ಯಮಂತ್ರಿಗಳು ಇದೇ ರೀತಿ ಹಣ ಸಂಗ್ರಹ ಮಾಡಿ ತೆಲಂಗಾಣಕ್ಕೆ ಕಳುಹಿಸಿದ್ದರು. ಇದೀಗ ವಾಲ್ಮೀಕಿ ನಿಗಮದ ಹಣ ನುಂಗಿ ನೀರು ಕುಡಿದಿದ್ದಾರೆ. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಎಲ್ಲವೂ ಗೊತ್ತಿದ್ದು, ಇದೀಗ ಹತಾಶ ಭಾವನೆಯಿಂದ ಅವರ ಶಿಷ್ಯರ ಬಗ್ಗೆ ಮಾತನಾಡುತ್ತಿದ್ದಾರೆ. ಶಾಸಕ ದದ್ದಲ ಅವರು ನನ್ನನ್ನು ಬಂಧಿಸಿ ಎಂದು ಎಸ್‌ಐಟಿ ಎದುರು ಏತಕ್ಕೆ ಕೂರಬೇಕಿತ್ತು ಎಂದು ಪ್ರಶ್ನಿಸಿದ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಲ್ಲೂ ಸಿಲುಕಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ಸಿನ ಎಲ್ಲರೂ ಕಳ್ಳರು ಎಂದರು.

ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿತ್ತು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ಕೊಡಲಿ ಎಂದಿದ್ದ ಸಚಿವ ಸಂತೋಷ ಲಾಡ್‌ಗೆ ತಿರುಗೇಟು ಕೊಟ್ಟ ಜೋಶಿ, ತಪ್ಪು ಮಾಡಿದವರನ್ನು ಕೇಂದ್ರ ಸರ್ಕಾರ ಶಿಕ್ಷೆ ಮಾಡುತ್ತದೆ. ಆದರೆ, ವಾಲ್ಮೀಕಿ ಹಗರಣದಲ್ಲಿ ಖಜಾನೆಯಿಂದ ಹಣ ಹೋಗಿದೆ ಎಂಬುದು ಮಹತ್ವದ ಸಂಗತಿ ಎಂದರು. ಇಲೆಕ್ಟ್ರೋ ಬಾಂಡ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ₹ 1600 ಕೋಟಿ ಹಣ ಬಂದಿದೆ. ಆ ಹಣ ಎಲ್ಲಿಂದ ಬಂತು. ಹಣವಿಲ್ಲದೇ ಕಾಂಗ್ರೆಸ್‌ ಚುನಾವಣೆ ಮಾಡಿದೆಯಾ? ಕಾರ್ಮಿಕ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಲಾಡ್‌ ವಿರುದ್ಧ ಆರೋಪಿಸಿದರು.