ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಡಿ. 22ರಿಂದ ನಡೆಯಲಿರುವ ಪ್ರತಿಷ್ಠಿತ ಕರಾವಳಿ ಉತ್ಸವದಲ್ಲಿ ಬಾಲಿವುಡ್ ಗಾಯಕ ಸೋನು ನಿಗಮ್ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಹಾಗೂ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು.
ಕನ್ನಡಪ್ರಭ ವಾರ್ತೆ ಕಾರವಾರ
ಡಿ. 22ರಿಂದ 28ರ ವರೆಗೆ ರವೀಂದ್ರನಾಥ ಠಾಗೂರ್ ಕಡಲ ತೀರದಲ್ಲಿ ನಡೆಯುವ ಕರಾವಳಿ ಉತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಪ್ರವಾಸೋದ್ಯಮ ಸಚಿವರು ಮತ್ತು ಕಂದಾಯ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಉಪಸ್ಥಿತರಿದ್ದರು.ಹೊರರಾಜ್ಯದವರ ಕಾರ್ಯಕ್ರಮ ಆಯೋಜಿಸಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆ: ಕರವೇ ಸದಸ್ಯರಿಂದ ಜಿಲ್ಲಾಡಳಿತಕ್ಕೆ ಮನವಿ
ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಡಿ. 22ರಿಂದ ನಡೆಯಲಿರುವ ಪ್ರತಿಷ್ಠಿತ ಕರಾವಳಿ ಉತ್ಸವದಲ್ಲಿ ಬಾಲಿವುಡ್ ಗಾಯಕ ಸೋನು ನಿಗಮ್ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಹಾಗೂ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.ಈ ಕುರಿತು ಜಿಲ್ಲಾಧಿಕಾರಿ ಹಾಗೂ ಕರಾವಳಿ ಉತ್ಸವ ಸಮಿತಿಗೆ ಮನವಿ ಸಲ್ಲಿಸಿರುವ ಕರವೇ ಜಿಲ್ಲಾಧ್ಯಕ್ಷ ಅಕ್ಷಯ್ ನಾಗೇಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹5 ಕೋಟಿ ಅನುದಾನವಿದ್ದರೂ, ಸ್ಥಳೀಯ ಕನ್ನಡ ಕಲಾವಿದರನ್ನು ಕಡೆಗಣಿಸಿ, ಹೊರರಾಜ್ಯದ ಹಾಗೂ ಪಾಶ್ಚಿಮಾತ್ಯ ಶೈಲಿಯ ಕಾರ್ಯಕ್ರಮಗಳಿಗೆ ಮಣೆ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕನ್ನಡ ವಿರೋಧಿಯಾಗಿರುವ ಗಾಯಕ ಸೋನು ನಿಗಮ್ ಅವರ ಕಾರ್ಯಕ್ರಮವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಹಣವಿಲ್ಲ ಎನ್ನುವ ಇಲಾಖೆ, ಈಗ ಹೊರಗಿನ ಕಲಾವಿದರಿಗೆ ಕೋಟಿಗಟ್ಟಲೆ ಹಣ ಸುರಿಯುತ್ತಿರುವುದು ಎಷ್ಟು ಸರಿ? ಎಂದು ಸಂಘಟನೆ ಪ್ರಶ್ನಿಸಿದೆ. ಈ ನಿಟ್ಟಿನಲ್ಲಿ ಅವರ ಕಾರ್ಯಕ್ರಮ ರದ್ದುಗೊಳಿಸಿ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ.
ಹೊರಗಿನ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳಿಗೆ ಗುತ್ತಿಗೆ ನೀಡುವ ಮೂಲಕ ಸ್ಥಳೀಯ ಕುಶಲಕರ್ಮಿಗಳು ಮತ್ತು ಕಲಾವಿದರ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಕರವೇ ಜಿಲ್ಲಾ ಘಟಕ ಎಚ್ಚರಿಸಿದೆ.