ಕಾಲ್ತುಳಿತ ಘಟನೆಯಿಂದ ಸಿಎಂ ಬಹಳ ನೊಂದಿದ್ದಾರೆ

| Published : Jun 09 2025, 03:27 AM IST

ಕಾಲ್ತುಳಿತ ಘಟನೆಯಿಂದ ಸಿಎಂ ಬಹಳ ನೊಂದಿದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಆಪರೇಷನ್ ಸಿಂಧೂರದಿಂದ ಐಪಿಎಲ್‌ ಪಂದ್ಯ ಮುಂದೂಡಲಾಗಿತ್ತು. ಪಂದ್ಯದ ಬಳಿಕ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಆಟಗಾರರ ಕಮಿಟ್‌ಮೆಂಟ್‌ನಿಂದ ಸಂಭ್ರಮಾಚರಣೆ ತೀರ್ಮಾನಿಸಿತೇ ಹೊರತು ಇದರಲ್ಲಿ ಸರ್ಕಾರದ ಪಾತ್ರ ಇಲ್ಲ. ಬಿಜೆಪಿ, ಜೆಡಿಎಸ್ ನಾಯಕರು ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ, ನಮಗೆಲ್ಲಾ ಬಹಳ ದುಃಖವಾಗಿದೆ. ಮುಖ್ಯಮಂತ್ರಿಗಳಂತೂ ಬಹಳ ನೋವು ತಿಂದಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ತನಿಖೆ ಮಾಡುತ್ತಿದೆ. ಸತ್ಯಾಸತ್ಯತೆ ಬಂದ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ತೀರ್ಮಾನ ಮಾಡಿದ್ದು ಆರ್‌ಸಿಬಿ

ಸತ್ತವರ ಜೀವ ತಂದುಕೊಡಲು ಸಾಧ್ಯ ಇಲ್ಲ, ಕುಟುಂಬದ ಸದಸ್ಯರ ನೋವು ಮರೆಸಲು ಸಾಧ್ಯವಿಲ್ಲ. ನನ್ನ ವಿಧಾನ ಸಭಾ ಕ್ಷೇತ್ರವಾದ ಚಿಂತಾಮಣಿಯಲ್ಲಿ ಇಬ್ಬರು ಹುಡುಗರ ಸಾವಾಗಿದೆ. ನನಗೂ ನೋವಾಗಿದೆ. ನಾನು ಸಹ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ಪ್ರೇಮಿ, ವಿಶ್ವಕಪ್ ಪಂದ್ಯ ಗೆದ್ದಾಗಲೂ ಈ ರೀತಿ ಸಂಭ್ರಮ ಇರುತ್ತಿರಲಿಲ್ಲ. ಆದರೆ ಪ್ರೀಮಿಯರ್ ಲೀಗ್‌ಗೆ ಜನ ಈ ರೀತಿ ಸಂಭ್ರಮ ಮಾಡುತ್ತಾರೆ. ಮೈಮರೀತಾರೆ ಅನ್ನೋದು ನಾನು ನೋಡಿಲ್ಲ. ಹಳ್ಳಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಐಪಿಎಲ್ ಆಪರೇಷನ್ ಸಿಂಧೂರದಿಂದ ಕೆಲ ಸಮಯ ವಿಳಂಬ ಆಯಿತು. ಹಾಗಾಗಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಆಟಗಾರರ ಕಮಿಟ್‌ಮೆಂಟ್‌ನಿಂದ ಸಂಭ್ರಮಾಚರಣೆ ತೀರ್ಮಾನ ಮಾಡಿದ್ದು ನಾವಲ್ಲ ಎಂದರು.

ಒಪನ್ ಪರೇಡ್‌ಗೆ ಬಿಟ್ಟಿಲ್ಲ ಅಂದಾಗ ವಿಪಕ್ಷದವರೇ ಕ್ರೀಡಾಭಿಮಾನಿಗಳ ವಿರೋಧಿ ಸರ್ಕಾರ ಎಂದು ಟ್ವೀಟ್ ಮಾಡಿದ್ದರು. ದುರ್ಘಟನೆ ಆದ ಕೂಡಲೇ ಬೇರೆ ರೀತಿ ಯಾಕೆ ಮಾತಾಡ್ತೀರಾ. ಅನಾಹುತ ಆಗಬಹುದು ಎಂದು ಸರ್ಕಾರದ ಗಮನಕ್ಕೂ ಬಂದಿತ್ತು. ಆದರೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಬಹಳ ಪಂದ್ಯಗಳು ನಡೆದಿವೆ, ಸಾವಿರಾರು ಜನ ಬಂದಿರೋ ಜಾಗ ಅದು. ಐದಾರು ಪಂದ್ಯಕ್ಕೆ ಬರುವ ಜನ ಒಂದೇ ಬಾರಿಗೆ ಬಂದಿದ್ದಾರೆ. ಹಾಗಂತ ನಾವು ಸಮರ್ಥನೆ ಮಾಡಿಕೊಳ್ಳಲು ಸಾಧ್ಯ ಇಲ್ಲ ಎಂದು ಹೇಳಿದರು.

ಕುಂಭಮೇಳ ಕಾಲ್ತುಳಿತ ಟೀಕಿಸಿಲ್ಲ

ಪಹಲ್ಗಾಮ್ ದಾಳಿ ಘಟನೆ ಕುಂಭಮೇಳ ಕಾಲ್ತುಳಿತ ಘಟನೆಯನ್ನು ನಾವು ಟೀಕಿಸಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೃತ ಪಟ್ಟವರ ಬಗ್ಗೆ ಬಿಜೆಪಿ, ಜೆಡಿಎಸ್ ಗೆ ಕರುಣೆ ಇಲ್ಲ. ಬಿಜೆಪಿ, ಜೆಡಿಎಸ್ ನವರು ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.