ಕುರುಬ ಮತಗಳಿಗಾಗಿ ಸಿಎಂ ಜಿಲ್ಲಾ ಪ್ರವಾಸ

| Published : May 06 2024, 12:38 AM IST

ಸಾರಾಂಶ

ಕುರುಬ ಸಮುದಾಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕೂಡುಗೆ ಏನು ಎಂದು ಅವರೇ ಹೇಳಬೇಕು. ಇದೀಗ ಕುರುಬ ಸಮುದಾಯ ಮತಕ್ಕಾಗಿ ಮುಖ್ಯಮಂತ್ರಿ ಅವರನ್ನೇ ಜಿಲ್ಲೆ ಸೇರಿದಂತೆ ಇತರೆ ಕಡೆಗಳಲ್ಲಿ ಪ್ರವಾಸ ಮಾಡಿಸುತ್ತಿದ್ದಾರೆ. ಪ್ರಸ್ತುತ 2024ರ ಲೋಕಸಭಾ ಚುನಾವಣೆ, ಜಾತಿ ಆಧಾರಿತ ಚುನಾವಣೆಯಲ್ಲ. ಇದು ಇಡೀ ದೇಶದ ಭವಿಷ್ಯಕ್ಕಾಗಿ ನಡೆಯುವ ಚುನಾವಣೆಯಾಗಿದೆ ಎಂದು ಮಾಜಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಹಿಂದುಳಿದ ಮುಖಂಡರ ಸಭೆಯಲ್ಲಿ ಭೈರತಿ ಬಸವರಾಜ್ ಆರೋಪ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕುರುಬ ಸಮುದಾಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕೂಡುಗೆ ಏನು ಎಂದು ಅವರೇ ಹೇಳಬೇಕು. ಇದೀಗ ಕುರುಬ ಸಮುದಾಯ ಮತಕ್ಕಾಗಿ ಮುಖ್ಯಮಂತ್ರಿ ಅವರನ್ನೇ ಜಿಲ್ಲೆ ಸೇರಿದಂತೆ ಇತರೆ ಕಡೆಗಳಲ್ಲಿ ಪ್ರವಾಸ ಮಾಡಿಸುತ್ತಿದ್ದಾರೆ. ಪ್ರಸ್ತುತ 2024ರ ಲೋಕಸಭಾ ಚುನಾವಣೆ, ಜಾತಿ ಆಧಾರಿತ ಚುನಾವಣೆಯಲ್ಲ. ಇದು ಇಡೀ ದೇಶದ ಭವಿಷ್ಯಕ್ಕಾಗಿ ನಡೆಯುವ ಚುನಾವಣೆಯಾಗಿದೆ ಎಂದು ಮಾಜಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಭಾನುವಾರ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಹಿಂದುಳಿದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಹಿತಕಾಯುವ ಕಾಂತರಾಜ್ ವರದಿಯನ್ನು ಕಸದ ಬುಟ್ಟಿಗೆ ಹಾಕಿ ಎಂದು ಹೇಳಿದ ಕಾಂಗ್ರೇಸ್ ನಾಯಕರ ಮಾತಿಗೆ ಸ್ವಾಭಿಮಾನಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳು ಪ್ರಸ್ತುತ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ಮೂಲಕ ಆ ಪಕ್ಷವನ್ನು ಕಸದ ಬುಟ್ಟಿಗೆ ಹಾಕಬೇಕು ಎಂದರು.

ನಮಗೆ ನಮ್ಮ ದೇಶ ಕಾಯುವ ಹಾಗೂ ಸಂರಕ್ಷಣೆ ಮಾಡುವ ಒಬ್ಬ ಧೀಮಂತ ನಾಯಕ ಬೇಕು ಅಂತರ ರಾಷ್ಟ್ರೀಯಮಟ್ಟದಲ್ಲಿ ದೇಶದ ಘನತೆ ಎತ್ತಿ ಹಿಡಿಯುವ ಪ್ರಧಾನಿ ಬೇಕು. ಈ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ದೇಶಕ್ಕೆ ಅನಿವಾರ್ಯವಾಗಿದ್ದಾರೆ. ನಾವು ಬಿಜೆಪಿ ಅಭ್ಯರ್ಥಿಗೆ ನೀಡುವ ಒಂದೊಂದು ಮತ ಅದು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಈ ದೇಶದ ಪ್ರತಿಯೊಬ್ಬ ಮತದಾರರೂ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಬಿಜೆಪಿ ಎಂದೂ ಹಿಂದುಳಿದ ಮತ್ತು ದಲಿತ ಸಮುದಾಯವನ್ನು ಕಡೆಗಣಿಸಿಲ್ಲ. ಆದರೆ, ವಿರೋಧ ಪಕ್ಷದವರು ಕೇವಲ ಮತಕ್ಕಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಹಿಂದುಳಿದ ವರ್ಗದವರು ಅಪಪ್ರಚಾರಕ್ಕೆ ಕಿವಿಗೊಡದೇ ಬಿಜೆಪಿ ಬೆಂಬಲಿಸುವ ಮೂಲಕ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವಂತೆ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರಾದ ಕೆ.ಪಿ.ಕುಬೇಂದ್ರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಜೆ.ಕೆ.ಸುರೇಶ್, ಜಿ.ಪಂ. ಮಾಜಿ ಸದಸ್ಯ ಎಂ.ಆರ್. ಮಹೇಶ್, ಧರ್ಮಪ್ಪ, ಎಂ.ಎಸ್. ಫಾಲಾಕ್ಷಪ್ಪ, ಮಂಜುನಾಥ ನೆಲಹೊನ್ನೆ, ದಿಡಗೂರು ಫಾಲಾಕ್ಷಪ್ಪ, ಎಸ್.ಬೀರಪ್ಪ, ದೇವರಾಜ್ ನೆಲಹೊನ್ನೆ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಮುಖಂಡರು ಇದ್ದರು.

- - - -5ಎಚ್.ಎಲ್.ಐ3:

ಹೊನ್ನಾಳಿ ಪಟ್ಟಣದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಭಾನುವಾರ ಹಿಂದುಳಿದ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್ ಮಾತನಾಡಿದರು. ಎಂ.ಪಿ.ರೇಣುಕಾಚಾರ್ಯ ಇತರರು ಇದ್ದರು.