ಕನ್ನಡಪ್ರಭ ವಾರ್ತೆ ಬೆಳಗಾವಿ

ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುವ ಸಂಬಂಧ ಜೂ.20 ರಂದು ಸಿಎಂ ಡಿ.ಕೆ.ಶಿವಕುಮಾರ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜೊತೆಗೆ ಮುಂಬೈನಲ್ಲಿ ಸಭೆ ನಡೆಸಲಿದ್ದಾರೆ. ಈ ಬಾರಿ 2 ಟಿಎಂಸಿ ನೀರು ಬಿಡುಗಡೆ ಆಗುವ ವಿಶ್ವಾಸ ಇದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಿಂದೆ ಬೇಸಿಗೆ ಸಮಯದಲ್ಲಿ ಮಹಾರಾಷ್ಟ್ರದಿಂದ 2 ಟಿಎಂಸಿ ನೀರು ಬಿಡುತ್ತಿದ್ದರು. ಆದರೆ, ಕಳೆದ ಐದಾರು ವರ್ಷಗಳಿಂದ ಬಿಡುತ್ತಿಲ್ಲ. ಹೀಗಾಗಿ, ಮೊದಲಿನ‌ ಹಾಗೆ ನೀರು ಬಿಡುಗಡೆ ಮಾಡುವಂತೆ ನಮ್ಮ ಮುಖ್ಯಮಂತ್ರಿಗಳು ಮಹಾ ಸಿಎಂ ಮುಂದೆ ಪ್ರಸ್ತಾಪಿಸಲಿದ್ದಾರೆ. 2 ಟಿಎಂಸಿ ನೀರು ಬರುವ ವಿಶ್ವಾಸವಿದೆ. ಇದಕ್ಕೆ ಇನ್ನೂ 10 ದಿನ‌ ಸಮಯ ಬೇಕಾಗುತ್ತದೆ. ಆ ನೀರನ್ನು ಕೇವಲ ಕುಡಿಯಲು ಮಾತ್ರ ಬಳಸಲಾಗುವುದು ಎಂದರು.ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದ ಪರಿಣಾಮ ಒಂದೂವರೇ ಟಿಎಂಸಿ ನೀರನ್ನು ನಾವು ಕಳೆದುಕೊಳ್ಳಬೇಕಾಯಿತು. ಅಲ್ಲಿ ಈಗ 0.08 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಮೊನ್ನೆಯ ಸಭೆಯಲ್ಲಿ ಈ ವಿಷಯದ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಪ್ರಸ್ತಾಪ ಮಾಡಿದ್ದೇನೆ. ಹೀಗಾಗಿ, ನಮ್ಮ‌‌ ಸಿಎಂ ತಾವೇ ಖುದ್ದಾಗಿ ಮಹಾರಾಷ್ಟ್ರ ಸಿಎಂ ಭೇಟಿ ಆಗಿ, ನೀರು ಬಿಡುವಂತೆ ಅವರಿಗೆ ಮನವರಿಕೆ ಮಾಡಲಿದ್ದಾರೆ ಎಂದರು.ಘಟಪ್ರಭಾ ನದಿಗೆ ಅಡ್ಡಲಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯದಲ್ಲಿ ಸದ್ಯಕ್ಕೆ 5.5 ಟಿಎಂಸಿ ನೀರಿದೆ‌. ಈಗ ಕೃಷಿ ಚಟುವಟಿಕೆಗೆ ಯಾವುದೇ ರೀತಿ ನೀರು ಪೂರೈಕೆ‌ ಮಾಡುತ್ತಿಲ್ಲ. ಈ ನೀರನ್ನೂ ಕೇವಲ ಕುಡಿಯಲು ಮಾತ್ರ ಬಳಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಮಲಪ್ರಭಾ‌ ನದಿಯಲ್ಲಿ 8 ಟಿಎಂಸಿ ನೀರಿದೆ. ಅದರಲ್ಲಿ ನಮ್ಮ ನಿಯಂತ್ರಣದಲ್ಲಿ 5 ಟಿಎಂಸಿ ನೀರು ಬರುತ್ತದೆ. ಧಾರವಾಡ ಜಿಲ್ಲೆಗೆ ಜುಲೈ ತಿಂಗಳ ಅಂತ್ಯದವರೆಗೆ 0.36 ಟಿಎಂಸಿ ನೀರು ಬೇಕಾಗುತ್ತದೆ. ಸವದತ್ತಿ ಮತ್ತು ಬೈಲಹೊಂಗಲಕ್ಕೆ 0.03 ಟಿಎಂಸಿ ನೀರು ಕೊಡಬೇಕಾಗುತ್ತದೆ. ಹೀಗಾಗಿ, ಹಿಡಕಲ್ ಮತ್ತು ನವಿಲುತೀರ್ಥ ಜಲಾಶಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದರು.ಬೆಳಗಾವಿ ನಗರದಲ್ಲಿ ತಕ್ಷಣ ತುರ್ತು ನಿಗಾ ಯೋಜನೆ ಸಿದ್ಧಪಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ. ಖಾಸಗಿ ಬೋರವೆಲ್, ಟ್ಯಾಂಕರ್ ಗುರುತಿಸಿ, ಅವುಗಳನ್ನು ವಶಕ್ಕೆ ಪಡೆದುಕೊಂಡು, ಬಾಡಿಗೆ ರೂಪದಲ್ಲಿ ಬಳಸಲಾಗುತ್ತದೆ. ಒಂದು ಟ್ಯಾಂಕರ್‌ಗೆ ಎಷ್ಟು ದರ ನಿಗದಿಪಡಿಸಬೇಕು ಎಂಬುವುದನ್ನು ತಿಳಿಸುವಂತೆ ಹೇಳಿದ್ದೇವೆ. ಅದನ್ನು ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದರು.140 ವರ್ಷಕ್ಕೆ ಒಮ್ಮೆ ಈ ರೀತಿ ಸೂಪರ್ ಎಲ್ ನಿನೋದಿಂದ ಈ ರೀತಿ ಪರಿಸ್ಥಿತಿ ಉದ್ಭವಿಸುತ್ತದೆ. ಇಂತ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡುತ್ತೇವೆ. ಕುಡಿಯಲು ಸಾಕಷ್ಟು ನೀರಿದೆ ಎಂದ ನಂತರವೇ ಕೃಷಿ ಚಟುವಟಿಕೆ ಬಗ್ಗೆ ಗಮನಹರಿಸುತ್ತೇವೆ. ಒಂದು ವೇಳೆ ಬೆಳೆ ಹಾನಿಯಾದರೆ, ಬರಗಾಲ ಅಂತಾ ಘೋಷಿಸಿ, ಬೆಳೆ ಪರಿಹಾರವನ್ನು ನೀಡಲಾಗುತ್ತದೆ ಎಂದರು.ಸದ್ಯಕ್ಕೆ ನಮ್ಮಲ್ಲಿ 36 ವಾರಕ್ಕೆ ಬೇಕಾಗುವಷ್ಟು ಮೇವಿನ ಲಭ್ಯತೆ ಇದೆ. ಮೂರನಾಲ್ಕು ವಾರದ ಬಳಿಕ ಪರಿಸ್ಥಿತಿ ಅವಲೋಕಿಸುತ್ತೇವೆ. ಮುಂಗಾರು ಮುಗಿಯುವ ತನಕ ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಉದ್ಭವಿಸುವುದಿಲ್ಲ. ಜಾನುವಾರುಗಳಿಗೆ ನೀರಿನ ವ್ಯವಸ್ಥೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು ಮಾಡಲಿವೆ. ಎಲ್ಲೆಲ್ಲಿ ಗೋಶಾಲೆಗಳಿವೆ ಅಲ್ಲೆಲ್ಲ ನೀರು ಸಂಗ್ರಹಿಸುವಂತೆ ಮಾಡಲಾಗುವುದು. ಇದೆಲ್ಲವನ್ನು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಮಾನಿಟರ್ ಮಾಡಲಿದೆ ಎಂದರು.ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ನೀರು ಬಳಕೆ ಮಾಡಬೇಕು. ಕ್ಲಿಷ್ಟಕರ ಸಮಯದಲ್ಲಿ ಹನಿ ನೀರು ಕೂಡ ಮುಖ್ಯ. ಸಾಮಾನ್ಯವಾಗಿ ಪ್ರತಿದಿನ ಪ್ರತಿವ್ಯಕ್ತಿಗೆ 135 ಲೀಟರ್ ಲೆಕ್ಕಾಚಾರದಂತೆ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ನೀರಿನ ಕೊರತೆ ಇರುವಾಗ ಎಷ್ಟು ಆಗುತ್ತದೆಯೋ ಅಷ್ಟು ಕಡಿಮೆ ನೀರು ಬಳಸುವಂತೆ ಕೋರಿದರು‌.ಈ ಬಾರಿ ಸೂಪರ್ ಎಲ್ ನಿನೋ ಉಂಟಾಗುತ್ತಿದೆ. ಪೆಸಿಫಿಕ್ ಮಹಾಸಾಗರದ ನೀರಿನ ಮೇಲ್ಮೈ ತಾಪಮಾನದಲ್ಲಿ ಉಂಟಾಗುವ ನೈಸರ್ಗಿಕ ಬದಲಾವಣೆ ಮತ್ತು ಅದರಿಂದ ಜಾಗತಿಕ ಹವಾಮಾನದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ನಮ್ಮಲ್ಲಿ ಮಳೆ ಕೊರತೆ, ಬರಗಾಲ ಮತ್ತು ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ, ಈ ವರ್ಷ ಶೇ.60ರಷ್ಟು ಮುಂಗಾರು ಮಳೆ ಫೇಲ್ ಆಗುವ ಸಾಧ್ಯತೆ ಇದೆ.

-ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ.