ಪ್ರಧಾನಿಗೆ ಪತ್ರ ಬರೆದಿದ್ದೇನೆಂದು ಸಿಎಂ ಹಾರಿಕೆ ಉತ್ತರ

| Published : Nov 08 2025, 01:15 AM IST

ಪ್ರಧಾನಿಗೆ ಪತ್ರ ಬರೆದಿದ್ದೇನೆಂದು ಸಿಎಂ ಹಾರಿಕೆ ಉತ್ತರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಬ್ಬು ಬೆಳೆಗಾರರು 8 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಹೋರಾಟ ಸ್ಥಳಕ್ಕೆ ಭೇಟಿ ನೀಡುವ ಬದಲು, ಪ್ರಧಾನಿಗೆ ಪತ್ರ ಬರೆದಿದ್ದೇನೆಂದು ಹಾರಿಕೆ ಉತ್ತರ ನೀಡುತ್ತೀರಾ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ದಾವಣಗೆರೆ: ರಾಜ್ಯದಲ್ಲಿ ಕಬ್ಬು ಬೆಳೆಗಾರರು 8 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಹೋರಾಟ ಸ್ಥಳಕ್ಕೆ ಭೇಟಿ ನೀಡುವ ಬದಲು, ಪ್ರಧಾನಿಗೆ ಪತ್ರ ಬರೆದಿದ್ದೇನೆಂದು ಹಾರಿಕೆ ಉತ್ತರ ನೀಡುತ್ತೀರಾ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿ ಶುಕ್ರವಾರ ತಮ್ಮ ಬಂಧುಗಳಾದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕ ಬಿ.ಸಿ.ಉಮಾಪತಿ ಅವರ ಸಹೋದರ ಬಿ.ಸಿ.ಶಿವಕುಮಾರ್‌ರ ಪುತ್ರ ಮೃಣಾಲ ಎಸ್. ಬಂಕಾಪುರ ವಿವಾಹಕ್ಕೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಬ್ಬು ಬೆಳೆಗಾರರ ವಿಚಾರದಲ್ಲಿ ಹಾರಿಕೆ ಉತ್ತರ ನೀಡುವುದನ್ನು ಬಿಡಲಿ. ಜಾಣ ಕುರುಡುತನ ಪ್ರದರ್ಶನ ಮಾಡುವುದನ್ನೂ ನಿಲ್ಲಿಸಲಿ ಎಂದರು.

ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಇದೆ ಎಂಬುದನ್ನೂ ಸಿದ್ದರಾಮಯ್ಯ ನೋಡಬೇಕು. ಅದನ್ನು ಬಿಟ್ಟು ಪ್ರಧಾನಿಗೆ ಪತ್ರ ಬರೆದಿದ್ದೇನೆಂದು ಹಾರಿಕೆ ಉತ್ತರ ನೀಡಿದರೆ ಹೇಗೆ? ಕೇಂದ್ರ-ರಾಜ್ಯ ಸರ್ಕಾರಗಳು ಒಂದೇ ಎಂಬುದೇ ನಿಮ್ಮ ತಲೆಯಲ್ಲಿ ಇಲ್ಲವೆಂದರೆ, ಎರಡನೇ ಬಾರಿಗೆ ನೀವು ಮುಖ್ಯಮಂತ್ರಿ ಆಗಿರುವುದೇ ವ್ಯರ್ಥ ಎಂದು ಅವರು ಕುಟುಕಿದರು.

ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿಕೆ ನೀಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉದ್ಧಟತನದ ಪರಮಾವಧಿಯಾಗಿದೆ. ಮಾತೆತ್ತಿದರೆ ಪ್ರಧಾನಿ ಕಡೆಗೆ ಬೊಟ್ಟು ಮಾಡುತ್ತೀರಿ. ನಿಮಗೇನೂ ಬೇರೆ ಕೆಲಸವೇ ಇಲ್ಲವಾ? ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕವೊಂದೇ ಅಲ್ಲ. ಮಾತೆತಿದ್ದರೆ ಸಂಸದರು ಬರುವುದಿಲ್ಲವೆನ್ನುತ್ತೀರಿ. ಎಲ್ಲರೂ ಬರುತ್ತೇವೆ. ಆದರೆ, ಮೊದಲು ನಿಮ್ಮ ನಡವಳಿಕೆಯೇ ಸರಿ ಇಲ್ಲ ಎಂದು ಸೋಮರ್ಣಣ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರು ವಾಸ್ತವಾಂಶಗಳನ್ನು ತಿಳಿದುಕೊಂಡು ಮಾತನಾಡಬೇಕು. ಒಳ್ಳೆಯ ಕೆಲಸ ಏನೇ ಇದ್ದರೂ ಅದು ನಿಮ್ಮದು. ನೀವು ಮಾಡುವ ಕೆಟ್ಟ ಕೆಲಸೆಗಳನ್ನೆಲ್ಲಾ ಕೇಂದ್ರ ಸರ್ಕಾರದ ಮೇಲೆ ಹಾಕುತ್ತೀರಾ? ಇಂದಿನ ಸಭೆ ಮುಗಿಸಿ, ದೆಹಲಿದೆ ಬಂದು, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಂದ್ರ ಸಚಿವ ವಿ.ಸೋಮಣ್ಣ ಸಲಹೆ ನೀಡಿದರು.

ಬಿಎಸ್‌ಸಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಸೋಮಣ್ಣ ಭಾಗಿ

ಕೇಂದ್ರ ಸಚಿವ ವಿ.ಸೋಮಣ್ಣ ತಮ್ಮ ಬೀಗರಾದ ಪ್ರತಿಷ್ಟಿತ ಜವಳಿ ವರ್ತಕ, ಬಿ.ಎಸ್.ಚನ್ನಬಸಪ್ಪ ಅಂಡ್‌ ಸನ್ಸ್‌ ಮಾಲೀಕ ಬಿ.ಸಿ.ಉಮಾಪತಿ ಕುಟುಂಬದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಹಿರಿಯ ಜವಳಿ ವರ್ತಕ ಬಿ.ಸಿ.ಉಮಾಪತಿ ಅವರ ಕಿರಿಯ ಸಹೋದರ ಬಿ.ಸಿ. ಶಿವಕುಮಾರ್‌ರ ಪುತ್ರ ಮೃಣಾಲ ಎಸ್. ಬಂಕಾಪುರ ಮದುವೆಯಲ್ಲಿ ಭಾಗಿಯಾದ ಕೇಂದ್ರ ಸಚಿವ ವಿ.ಸೋಮಣ್ಣ ನವಜೋಡಿಗೆ ಹಾರೈಸಿ, ಆಶೀರ್ವದಿಸಿದರು. ಬಿ.ಸಿ.ಚಂದ್ರಶೇಖರ ಸೇರಿದಂತೆ ಕುಟುಂಬ ವರ್ಗ, ಬಂಧು-ಬಳಗದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ದಾವಣಗೆರೆಗೆ ಆಗಮಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ನಗರದ ಹೊರವಲಯದ ಲೋಕೋಪಯೋಗಿ ಇಲಾಖೆಯ ಸರ್ಕ್ಯೂಟ್ ಹೌಸ್‌ನಲ್ಲಿ ಹರಿಹರದ ಶಾಸಕ, ಬಿಜೆಪಿ ಹಿರಿಯ ಮುಖಂಡ ಬಿ.ಪಿ.ಹರೀಶ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ರಾವ್ ವಿಠ್ಠಲ ರಾವ್‌ ಇತರರು ಸ್ವಾಗತಿಸಿದರು.