ಸಂಪುಟ ವಿಸ್ತರಣೆ ಅಧಿಕಾರ ಸಿಎಂಗಿದೆ: ಶಾಸಕ ಕೋನರಡ್ಡಿ

| Published : Oct 27 2025, 12:15 AM IST

ಸಂಪುಟ ವಿಸ್ತರಣೆ ಅಧಿಕಾರ ಸಿಎಂಗಿದೆ: ಶಾಸಕ ಕೋನರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂತ್ರಿ ಮಂಡಲ ಬದಲಾವಣೆ ವೇಳೆ ಯಾರು ಕೆಲಸ ಮಾಡಿರುತ್ತಾರೆ, ಯಾರು ಕೆಲಸ ಮಾಡಿರಲ್ಲ. ಅವರ ಬದಲಾವಣೆ ಮಾಡುವುದರ ಬಗ್ಗೆ ಸಿಎಂ ಗಮನಕ್ಕೆ ಇರುತ್ತದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಧಾರವಾಡ: ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಈಗಾಗಲೇ ಸಿಎಂ ಹೇಳಿದ್ದಾರೆ. ಹೈಕಮಾಂಡ್ ಸೂಚನೆ ಕೊಟ್ಟ‌ ನಂತರ ಮುಖ್ಯಮಂತ್ರಿಗಳು ಆ ಮಾತು ಹೇಳಿದ್ದು, ಸಂಪುಟ ವಿಸ್ತರಣೆ ಮಾಡುವ ಅಧಿಕಾರ ಸಿಎಂ ಅವರಿಗೇ ಇದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದಂತೆ ಕೆಪಿಸಿಸಿ ಅಧ್ಯಕ್ಷರು ಮತ್ತು ಸಿಎಂ ಏನು‌ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲ ಶಾಸಕರು ಬದ್ಧ. ಮಂತ್ರಿ ಮಂಡಲ ಬದಲಾವಣೆ ವೇಳೆ ಯಾರು ಕೆಲಸ ಮಾಡಿರುತ್ತಾರೆ, ಯಾರು ಕೆಲಸ ಮಾಡಿರಲ್ಲ. ಅವರ ಬದಲಾವಣೆ ಮಾಡುವುದರ ಬಗ್ಗೆ ಸಿಎಂ ಗಮನಕ್ಕೆ ಇರುತ್ತದೆ. ಬದಲಾವಣೆ ಮಾಡುವುದು ಒಂದು ಕಡೆ ಒಳ್ಳೆಯದು. ಆದರೂ ಯಾರು ಒಳ್ಳೆಯ ಕೆಲಸ‌ ಮಾಡುತ್ತಾರೋ ಅವರನ್ನು ಇಟ್ಟುಕೊಳ್ಳಬೇಕು. ಯಾರು‌ ಕೆಲಸ ಮಾಡುವುದಿಲ್ಲವೋ, ಯಾರು ಶಾಸಕರಿಗೆ ಸ್ಪಂದನೆ ಮಾಡುವುದಿಲ್ಲವೋ ಅವರನ್ನು ಬದಲಾವಣೆ ಮಾಡುವುದು ಮುಖ್ಯಮಂತ್ರಿಗಳ ಬಳಿಯೇ ಇದೆ ಎಂದರು.

ಕೋನರಡ್ಡಿ ಸಚಿವ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪದೇ ಪದೇ ನಾನು ಸಚಿವ ಆಗಬೇಕು ಎಂದು ಹೇಳುವುದು ಸರಿ ಎನಿಸುವುದಿಲ್ಲ. ಎಲ್ಲರ ವಿವರ‌ ಪಡೆದು ತೀರ್ಮಾನ ಮಾಡುತ್ತೇವೆ ಎಂದು ಹೈಕಮಾಂಡ್ ಹೇಳಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ, ನಮ್ಮ ಗುರಿ 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕು ಹಾಗೂ ನಾವು ಪುನರಾಯ್ಕೆಯಾಗಬೇಕು ಎಂದರು.

ಸತೀಶ ಜಾರಕಿಹೋಳಿ ಬಗ್ಗೆ ಯತೀಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಯತೀಂದ್ರ ಕೂಡ ಹೇಳಿಕೆ‌ ಕೊಟ್ಟಿದ್ದಾರೆ. ನಾವು ರಸ್ತೆ ಮೇಲೆ ನಿಂತು ಮಾತನಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಶಾಸಕರು ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದೆ ಎಂದರು.

ಮುಂದಿನ ಸಿಎಂ ಯಾರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಹೈಕಮಾಂಡ್ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೆವಾಲೆ ಅವರು ಅದನ್ನು ತೀರ್ಮಾನ ಮಾಡುತ್ತಾರೆ. ನಮ್ಮ ಹಂತದ ಲೀಡರ್ ಅದನ್ನು ಮಾತನಾಡುವುದಲ್ಲ ಎಂದರು.

ಸಚಿವ ಕೃಷ್ಣ ಬೈರೇಗೌಡರು ಸಚಿವ ಸ್ಥಾನದ ಬಗ್ಗೆ ನೀಡಿರುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೋನರಡ್ಡಿ, ಕೃಷ್ಣ ಬೈರೇಗೌಡರು ಕಂದಾಯ ಇಲಾಖೆಯಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ಅವರ ಬದಲಾವಣೆ ನಾನಂತೂ ಒಪ್ಪುವುದಿಲ್ಲ. ಇಂತಹ ಒಳ್ಳೆ ಕೆಲಸ ಮಾಡುವವರು ಸರ್ಕಾರದಲ್ಲಿ ಇರಬೇಕು. ಅವರು ಆರ್‌ಡಿಪಿಆರ್ ಸಚಿವ, ಕೃಷಿ ಸಚಿವ ಇದ್ದವರು. ಯಾವ‌ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವ ನಾಯಕ. ಅವರಂಥ ೧೫ ಜನರನ್ನು ಇಟ್ಟುಕೊಂಡು ಉಳಿದವರನ್ನು ಬದಲಾವಣೆ ಮಾಡುವುದು ಸಿಎಂಗೆ ಬಿಟ್ಟಿದ್ದು ಎಂದರು.