ಸಿಎಂ ಹನಿ ಟ್ರ್ಯಾಪ್‌ ಪ್ರಕರಣದ ಸೂತ್ರದಾರರು: ಆರ್‌. ಅಶೋಕ್‌

| Published : Mar 28 2025, 12:30 AM IST

ಸಾರಾಂಶ

ಚಿಕ್ಕಮಗಳೂರು, ಹನಿಟ್ರ್ಯಾಪ್ ಪ್ರಕರಣ ಕಾಂಗ್ರೆಸ್‌ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ನನಗಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದರ ಸೂತ್ರದಾರರು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

- ಡಿ.ಕೆ. ಶಿವಕುಮಾರ್ , ಸಿದ್ದರಾಮಯ್ಯ ಪರವಾಗಿ ಗುಂಪುಗಾರಿಕೆ: ಆರೋಪ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹನಿಟ್ರ್ಯಾಪ್ ಪ್ರಕರಣ ಕಾಂಗ್ರೆಸ್‌ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ನನಗಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದರ ಸೂತ್ರದಾರರು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.ಗುರುವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಹನಿಟ್ರ್ಯಾಪ್ ನಡೆದಿದೆ ಎನ್ನುವುದಾದರೆ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಬೇಕಾಗಿತ್ತು. ಆದರೆ ಸದನದಲ್ಲಿ ವಿಷಯ ಪ್ರಸ್ತಾಪ ಮಾಡುತ್ತಾರೆ ಎಂದರೆ ಇದರಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡ ಇದೆ. ಮುಖ್ಯಮಂತ್ರಿಗಳೇ ಇದರ ಸೂತ್ರದಾರರು ಎಂದು ದೂರಿದರು.

ಕಾಂಗ್ರೆಸ್ ನಲ್ಲಿ ದೊಡ್ಡ ಗುಂಪುಗಾರಿಕೆ ನಡೆಯುತ್ತಿದೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪರವಾಗಿ ಗುಂಪುಗಾರಿಕೆ ನಡೆಯುತ್ತಿದ್ದು, ಇದರ ಮಧ್ಯೆ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಅಶೋಕ್ ಕಿಡಿಕಾರಿದರು.ಕೊಲೆಗಡುಕರ ಪಕ್ಷ

ತಮ್ಮ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಸಚಿವ ರಾಜಣ್ಣ ನೀಡಿರುವ ದೂರಿಗೆ ಪ್ರತಿಕ್ರಿಯಿಸಿದ ಅಶೋಕ್, ಹಾಗಿದ್ದ ಮೇಲೆ ಕಾಂಗ್ರೆಸ್ ಕೊಲೆಗಡುಕರ ಪಕ್ಷ ಎನ್ನುವುದು ಸಾಬೀತಾಯಿತಲ್ಲ ಎಂದು ತಿವಿದರು.ಹನಿಟ್ರ್ಯಾಪ್ ಫ್ಯಾಕ್ಟರಿನೂ ಅವರದ್ದೇ, ಕೊಲೆಗೆ ಬಂದಿದ್ದರು ಎಂದು ಹೇಳಿಕೆ ನೀಡುತ್ತಿರುವುದೂ ಅವರೇ, ಇದರ ಮಧ್ಯೆ ಆಡಳಿತ ಪಕ್ಷದವರ ದೂರವಾಣಿಯನ್ನೇ ಕದ್ದಾಲಿಸುತ್ತಾರೆ ಎಂದು ಹೇಳಿದವರೂ ಅವರ ಪಕ್ಷದವರೆ, ಕಾಂಗ್ರೆಸ್ ಅಧಿಕಾರ ಉಳಿಸಿ ಕೊಳ್ಳುವುದಕ್ಕೆ ಏನುಬೇಕಾದರೂ ಮಾಡುತ್ತದೆ ಎನ್ನುವುದಕ್ಕೆ ಇದೆಲ್ಲವೂ ಸಾಕ್ಷಿ ಎಂದು ಟೀಕಿಸಿದರು.ಈ ರೀತಿಯ ಹೊಲಸು ರಾಜಕಾರಣ ಕರ್ನಾಟಕಕ್ಕೆ ಶೋಭೆ ತರುವುದಿಲ್ಲ. ಓರ್ವ ಮಂತ್ರಿಯನ್ನು ಕಾಪಾಡಿ ಕೊಳ್ಳಬೇಕಾಗಿ ರುವುದು ಮುಖ್ಯಮಂತ್ರಿ ಕೆಲಸ. ಆದರೆ, ಅವರು ಗೃಹ ಸಚಿವರು ಎನ್ನುತ್ತಾರೆ. ಇತ್ತ ಗೃಹ ಸಚಿವರು ಸಿಎಂ, ಡಿಜಿ ಎಂದು ಹೇಳು ತ್ತಾರೆ. ಇದು ಎಡಬಿಡಂಗಿ ಸರ್ಕಾರ. ತೀರ್ಮಾನ ತೆಗೆದುಕೊಳ್ಳಬೇಕಿರುವುದು ಮುಖ್ಯಮಂತ್ರಿ ಅದೆಲ್ಲ ಗೃಹ ಸಚಿವರಿಗೆ ಬರುವುದಿಲ್ಲ ಎಂದರು.ಎಸ್‌ಐಟಿ, ಸಿಐಡಿ ಎಲ್ಲಾ ತನಿಖೆಗೆ ಸಿಎಂ ಆದೇಶ ಮಾಡಬೇಕು. ಗೃಹ ಸಚಿವರಿಗೆ ಬರುವುದಿಲ್ಲ. ಕರ್ನಾಟಕದಲ್ಲಿ ಹೇಳುವ ವರಿಲ್ಲ, ಕೇಳುವವರಿಲ್ಲ. ದನಗಳನ್ನ ರಸ್ತೆಗೆ ಬಿಟ್ಟಂತೆ ಆಗಿದೆ ಎಂದು ಮೂದಲಿಸಿದರು.ಕರ್ನಾಟಕದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ಸತ್ತು ಹೋಗಿದೆ. ಮಂತ್ರಿಗಳಿಗೆ ಹೇಳೋರು, ಕೇಳೋರು, ಕಾಪಾಡೋರು ಯಾರೂ ಇಲ್ಲ. ಇದೆಲ್ಲ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಕಾಂಗ್ರೆಸ್ಸಿನಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಆರೋಪಿಸಿದರು.ಕೇಂದ್ರದ ತೀರ್ಮಾನ ಅಂತಿಮ:

ಎಲ್ಲರೂ ಒಟ್ಟಿಗೆ ಹೋಗಬೇಕೆಂದು ಬಹಳ ಪ್ರಯತ್ನ ಮಾಡಿದೆವು. ಕೇಂದ್ರ ನಾಯಕರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ವಾಗಿರಬೇಕು, ಯಾರು ಪಕ್ಷದ ವಿರುದ್ಧ ಮಾತನಾಡುವುದು ಒಳ್ಳೆಯದಲ್ಲ ಎಂದು ಯತ್ನಾಳ್ ಉಚ್ಛಾಟನೆ ಕುರಿತ ಪ್ರಶ್ನೆಗೆ ಆರ್.ಅಶೋಕ್ ಪ್ರತಿಕ್ರಿಯಿಸಿದರು.

-ಬಾಕ್ಸ್--

ಕಾಂಗ್ರೆಸ್‌ನಲ್ಲಿ ಮುಂದುವರೆದ ಗೊಂದಲ:ರಾಜ್ಯ ಕಾಂಗ್ರೆಸ್ ನಲ್ಲಿ ಗೊಂದಲ ಮುಂದುವರೆದಿದೆ. ಕಾಂಗ್ರೆಸ್ ಮೂಲಗಳಿಂದಲೇ ನಮಗೆ ಬಂದಿರೋ ಮಾಹಿತಿ ಎರಡೂವರೆ ವರ್ಷದ ಅಗ್ರಿಮೆಂಟ್ ನ ಕೊಡೋದು, ತಗೋಳೋದು ಇರೋದು. ಈ ಸರ್ಕಾರ ಇದೇ ಗೊಂದಲದಲ್ಲಿ ಇರುತ್ತೋ... ಬಿದ್ದು ಹೋಗುತ್ತಾ ನೋಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದರು.ಒಟ್ಟಾರೆ ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ. ಹನಿಟ್ರ್ಯಾಪ್ ಹಾಗೂ ಸಿಎಂ ಕುರ್ಚಿ ಹಸ್ತಾಂತರ ಏನಾಗುತ್ತೋ ಏನೋ ಈ ಸರ್ಕಾರದಲ್ಲಿ ಹೊಡೆದಾಟ ನಡೆಯುತ್ತಿರೋದೆ ಸಿಎಂ ಕುರ್ಚಿಗಾಗಿ ಎಂದರು. ಸಿದ್ದರಾಮಯ್ಯ ಉಳಿಸಿಕೊಳ್ಳೋಕೆ ಹೊಡೆದಾಟ, ಡಿಕೆಶಿ ಕಿತ್ತುಕೊಳ್ಳೋಕೆ ಹೊಡೆದಾಟ, ಉಳಿಸಿಕೋ... ಕಿತ್ತೋಕೋ... ಇವೆರಡರ ಮಧ್ಯೆ ಕಾಂಗ್ರೆಸ್ ಸರ್ಕಾರವಿದೆ ಎಂದು ಆರೋಪಿಸಿದರು.ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ದೆಹಲಿಯಲ್ಲಿ ಕೇಂದ್ರದ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಹನಿಟ್ರ್ಯಾಪ್ ವಿಚಾರ ಕಾಂಗ್ರೆಸ್ಸಿನಲ್ಲಿ ದೊಡ್ಡ ಬಿರುಗಾಳಿ ಬೀಸುತ್ತಿದೆ ಎಂದರು.ಕಾದು ನೋಡೋಣ: ಮೃತ್ಯಂಜಯ ಸ್ವಾಮೀಜಿ ಸಭೆ ಕರೆದಿದ್ದಾರೆ. ಯತ್ನಾಳ್ ಪಂಚಮಸಾಲಿಗೆ ಸೇರಿದ್ದವರು, ಸಭೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ತಾರೆ ಅಂತ ಕಾದು ನೋಡೋಣ ಎಂದರು.ಎಲ್ಲರೂ ಒಟ್ಟಿಗೆ ಹೋಗಬೇಕೆಂದು ಬಹಳ ಪ್ರಯತ್ನ ಮಾಡಿದ್ವಿ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕುಂಠಿತವಾಗಿದೆ. ದುರಾಡಳಿತ, ಮುಸ್ಲಿಮರಿಗೆ ಮೀಸಲಾತಿ ನೀಡಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ.

ಕೇಂದ್ರ ನಾಯಕರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಾಗಿರಬೇಕು. ಯಾರೂ ಪಕ್ಷದ ವಿರುದ್ಧ ಮಾತನಾಡೋದು ಒಳ್ಳೆಯದ್ದಲ್ಲ, ಉಚ್ಚಾಟನೆ ಬಗ್ಗೆ ನಿನ್ನೆಯೇ ಕೇಂದ್ರದ ನಾಯಕರ ಜೊತೆ ಮಾತನಾಡಿದ್ದೇನೆ. ಇಂದು ಕೂಡ ಮಾತನಾಡುತ್ತೇನೆ ಅದನ್ನ ಮಾಧ್ಯಮದರ ಮುಂದೆ ಹೇಳುವುದಿಲ್ಲ. ಕೇಂದ್ರದ ತೀರ್ಮಾನಕ್ಕೆ ತಲೆಬಾಗಬೇಕು, ಬಾಗುತ್ತೇವೆ ಎಂದರು.