ಅನುದಾನ ಅಲಭ್ಯತೆಯ ಕಾರಣ ‘ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ಬೆಂಗಳೂರು ಸುತ್ತ ಮುತ್ತ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲು ಉದ್ದೇಶಿಸಿರುವ ಡಬ್ಬಲ್‌ ಬೆಡ್‌ರೂಮ್ ಫ್ಲ್ಯಾಟ್ ನಿರ್ಮಾಣ ಯೋಜನೆ ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

 ಬೆಂಗಳೂರು : ಅನುದಾನ ಅಲಭ್ಯತೆಯ ಕಾರಣ ‘ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ಬೆಂಗಳೂರು ಸುತ್ತ ಮುತ್ತ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲು ಉದ್ದೇಶಿಸಿರುವ ಡಬ್ಬಲ್‌ ಬೆಡ್‌ರೂಮ್ ಫ್ಲ್ಯಾಟ್ ನಿರ್ಮಾಣ ಯೋಜನೆ ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

ಯೋಜನೆಯಡಿ ಸಿಂಗಲ್ ಬೆಡ್ ರೂಮ್ ಮನೆ ನಿರ್ಮಾಣ ಆರಂಭಿಸಿದ ಸಂದರ್ಭದಲ್ಲೇ (2019-20) 2 ಬಿಎಚ್‌ಕೆ ಪ್ಲ್ಯಾಟ್ ನಿರ್ಮಾಣ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ, ಸರ್ಕಾರದಿಂದ ಅನುದಾನ ಸಿಗದೆ ಯೋಜನೆ ಆರಂಭವಾಗಲಿಲ್ಲ. ಮತ್ತೊಂದೆಡೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ, ಫ್ಲ್ಯಾಟ್‌ ದರವನ್ನು ಹೆಚ್ಚಿಸಲು ನಿಗಮ ಮುಂದಾಗಿದೆ.

ಯೋಜನೆ ರೂಪಿಸುವ ಹಂತದಲ್ಲಿ ಪ್ರತಿ ಫ್ಲ್ಯಾಟ್‌ ದರ ಅಂದಾಜು ₹14 ಲಕ್ಷ ನಿಗದಿಪಡಿಸಲಾಗಿತ್ತು. ಈಗ ದರ ಪರಿಷ್ಕರಣೆಯಾಗಿ 16ರಿಂದ ಗರಿಷ್ಠ ₹25 ಲಕ್ಷವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಸರ್ಕಾರ ಬೇಗ ಅನುದಾನ ಒದಗಿಸಿದರೆ ಕಾಲಮಿತಿಯಲ್ಲಿ ಯೋಜನೆ ಮುಗಿಸಿ ಪರಿಷ್ಕೃತ ದರದಲ್ಲಿ ಫ್ಲ್ಯಾಟ್‌ಗಳನ್ನು ಅರ್ಜಿದಾರರಿಗೆ ನೀಡಬಹುದು. ವಿಳಂಬವಾದಷ್ಟು ದರ ಹೆಚ್ಚಳ ಅನಿವಾರ್ಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಸರ್ಕಾರದಿಂದ ಒದಗಿಸಲಾಗುವ ಜಮೀನಿನಲ್ಲಿ ಆರ್ಥಿಕವಾಗಿ ಹಿಂದುಳಿದವರು, ಬಡವರಿಗಾಗಿ ಪ್ಲ್ಯಾಟ್ ನಿರ್ಮಿಸುತ್ತಿರುವ ಕಾರಣ ಯೋಜನೆಯ ವೆಚ್ಚವನ್ನು ಆರಂಭದಲ್ಲಿ ಸರ್ಕಾರವೇ ಭರಿಸಬೇಕಾಗುತ್ತದೆ. ಯೋಜನೆಯ ಮೊದಲ ಹಂತಕ್ಕೆ ಸುಮಾರು ₹600 ಕೋಟಿ ಅನುದಾನ ಒದಗಿಸುವಂತೆ ನಿಗಮ ಸರ್ಕಾರವನ್ನು ಕೋರಿತ್ತು. ಆದರೆ, ಅನುದಾನ ಲಭ್ಯವಾಗಿಲ್ಲ.

ಫ್ಲ್ಯಾಟ್ ಖರೀದಿಗೆ ಆಸಕ್ತಿ ತೋರಿಸಿ ಈಗಾಗಲೇ 5,114 ಜನ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಸುಮಾರು 485 ಚದರಡಿ ಕಾರ್ಪೇಟ್ ಏರಿಯಾ ಇರುವ 2 ಬಿಎಚ್‌ಕೆ ಫ್ಲ್ಯಾಟ್‌ನಲ್ಲಿ ಹಾಲ್, ಅಡುಗೆ ಮನೆ, 2 ಬೆಡ್‌ರೂಮ್‌ (ಒಂದಕ್ಕೆ ಅಟ್ಯಾಚ್ಡ್ ಬಾತ್‌ರೂಮ್), ಒಂದು ಪ್ರತ್ಯೇಕ ಸ್ನಾನ ಮತ್ತು ಶೌಚಗೃಹ ಇರುತ್ತದೆ. ಜಿ-3 ಮತ್ತು ಜಿ-14 ಮಹಡಿಗಳ ಫ್ಲ್ಯಾಟ್‌ ನಿರ್ಮಾಣ ಯೋಜನೆ ಇದಾಗಿದೆ.

ವಿಶೇಷತೆಗಳು

-ಪಡಿತರ ಚೀಟಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು

-ಮೊದಲ ಹಂತದಲ್ಲಿ 3,500 ಫ್ಲ್ಯಾಟ್ ನಿರ್ಮಾಣ ಗುರಿ

-ಆರಂಭದಲ್ಲಿ ನಿಗದಿಯಾಗಿದ್ದ ಪ್ರತಿ ಫ್ಲ್ಯಾಟ್ ದರ ₹14 ಲಕ್ಷ

-ಪರಿಷ್ಕರಣೆ ಬಳಿಕ ಪ್ಲ್ಯಾಟ್ ದರ ₹16 ಲಕ್ಷದಿಂದ ₹25 ಲಕ್ಷ?

-485 ಚದರಡಿಯಲ್ಲಿ ಫ್ಲ್ಯಾಟ್‌ ಕಾರ್ಪೇಟ್ ಏರಿಯಾ ನಿರ್ಮಾಣ

-ಮನೆ ಬಯಸಿ 5,113 ಜನರಿಂದ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ