ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಿಎಂ ಅಸ್ತು

| Published : Jul 31 2025, 12:47 AM IST

ಸಾರಾಂಶ

ಕೊಪ್ಪಳ ನಗರದಲ್ಲಿರುವ ಕಿಮ್ಸ್‌ ಆಸ್ಪತ್ರೆಯನ್ನೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಿಸಲು ಬಜೆಟ್‌ನಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಶಾಸಕ, ಸಚಿವರ ಸಭೆಯಲ್ಲಿ ಈ ಆಸ್ಪತ್ರೆಯಲ್ಲಿ ಮತ್ತೆ 5 ಮಹಡಿ ನಿರ್ಮಿಸಲು ಅನುಮತಿ ನೀಡಿದ್ದಾರೆ.

ಕೊಪ್ಪಳ:

ನಗರದಲ್ಲಿರುವ ಕಿಮ್ಸ್‌ ಆಸ್ಪತ್ರೆಯನ್ನೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಿಸಲು ಬಜೆಟ್‌ನಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಶಾಸಕ, ಸಚಿವರ ಸಭೆಯಲ್ಲಿ ಈ ಆಸ್ಪತ್ರೆಯಲ್ಲಿ ಮತ್ತೆ 5 ಮಹಡಿ ನಿರ್ಮಿಸಲು ಅನುಮತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಜಿಲ್ಲಾವಾರು ಶಾಸಕ, ಸಚಿವರ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತು ಪ್ರಸ್ತಾಪ ಮಾಡಿದಾಗ ಪ್ರತ್ಯೇಕವಾಗಿ ಭೂಮಿ ಖರೀದಿಸಿ ಆಸ್ಪತ್ರೆ ನಿರ್ಮಿಸುವುದು ವಿಳಂಬವಾಗುತ್ತದೆ. ಹೀಗಾಗಿ, ಈಗಿರುವ ಕಿಮ್ಸ್ ಆಸ್ಪತ್ರೆ ಕಟ್ಟಡ ನಾಲ್ಕು ಮಹಡಿ ಇದ್ದು, ಅದನ್ನೇ ಇನ್ನೈದು ಮಹಡಿ ನಿರ್ಮಿಸಿದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾಗುವಷ್ಟು ಕಟ್ಟಡ ಸಿಗಲಿದೆ ಎಂಬ ಮಾಹಿತಿಗೆ ಸಿಎಂ ಆಯಿತು ಹಾಗೆ ಮಾಡಿ ಎಂದಿದ್ದಾರೆ ಎನ್ನಲಾಗಿದೆ.

ಇದಲ್ಲದೆ ಜಿಲ್ಲೆಯ ರಾಜಕೀಯ ಬೆಳವಣಿಗೆ, ನನೆಗುದಿಗೆ ಬಿದ್ದಿರುವ ಯೋಜನೆಗಳ ಕುರಿತು ಚರ್ಚೆಯಾಯಿತಾದರೂ ಅಷ್ಟಾಗಿ ಚರ್ಚೆಯಾಗಲೇ ಇಲ್ಲ. ಕೇವಲ 15ರಿಂದ 20 ನಿಮಿಷದಲ್ಲಿ ಜಿಲ್ಲೆಯ ಸಚಿವರು, ಶಾಸಕರ ಸಭೆ ಮುಕ್ತಾಯವಾಯಿತು.

ಸದ್ಬಳಕೆ ಮಾಡಿಕೊಳ್ಳಿ:

ಪ್ರತಿಯೊಬ್ಬ ಶಾಸಕರಿಗೆ ₹ 50 ಕೋಟಿ ಅನುದಾನ ನೀಡಲಾಗುತ್ತದೆ. ಇದರ ಜತೆಗೆ ನಿಮಗೆ ಕೆಕೆಆರ್‌ಡಿಬಿ ಅನುದಾನ ಇರುವುದರಿಂದ ತುರ್ತಾಗಿ ಆಗಬೇಕಾಗಿರುವುದು ಹಾಗೂ ತೀರಾ ಅಗತ್ಯವಾಗಿರುವ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಸಿಎಂ ಸೂಚಿಸಿದರು. ಕೆಕೆಆರ್‌ಡಿಬಿ ಅನುದಾನ ಇರುವುದರಿಂದ ನಮಗೇನು ಸಮಸ್ಯೆಯಾಗುವುದಿಲ್ಲ. ಅದನ್ನು ಬಳಸಿಕೊಂಡೆ ಸರ್ಕಾರದ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ಶಾಸಕರು, ಸಚಿವರು ಮಾಹಿತಿ ನೀಡಿದರು.

ಸಚಿವ ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಇದ್ದರು.