ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಹಾಡಿಗಳಲ್ಲಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆ ರಾಜ್ಯಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಪಟ್ಟಣದ ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕ್ರಾಂತಿವೀರ ಶ್ರೀ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತ್ಯುತ್ಸವ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಕೆರೆ ಹಾಡಿಯಲ್ಲಿ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದ್ದರು, ನಂತರ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಹಾಗೂ ವಿವಿಧ, ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಿ ಆದಿವಾಸಿಗಳ ಬಹುದಿನ ಬೇಡಿಕೆಗಳಾದ ರಸ್ತೆ, ವಿದ್ಯುತ್ , ಕುಡಿಯುವ ನೀರು, ಮುಖ್ಯವಾಗಿ ಜಮಿಗಳಿಗೆ ಹಕ್ಕು ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.ಕೋಟೆ, ಸರಗೂರು, ತಾಲೂಕು ಸೇರಿದಂತೆ 119 ಹಾಡಿಗಳಿದ್ದು, ಇವರಿಗೆ ಪೌಷ್ಟಿಕ ಆಹಾರ ಆರು ತಿಂಗಳು ಮಾತ್ರ ನೀಡಲಾಗುತ್ತಿತ್ತು, ಆದಿವಾಸಿಗಳು ಪೌಷ್ಟಿಕ ಕೊರತೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಗ ಒಂದು ವರ್ಷಕ್ಕೆ ಪೌಷ್ಟಿಕ ಆಹಾರವನ್ನು ನೀಡುವ ವ್ಯವಸ್ಥೆ ಮಾಡಿದ್ದೇನೆ ಎಂದರು.
ಆದಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಕೇಂದ್ರದಲ್ಲಿ ಒಂದು ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆದಿವಾಸಿ ಸಮುದಾಯ ಭವನ ಪೂರ್ಣವಾಗುವ ಹಂತದಲ್ಲಿದೆ, ಆದಿವಾಸಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗುವುದರ ಜೊತೆಗೆ ಮುಜಾಫರ್ ಅಸಾದಿ ವರದಿಯಂತೆ ತಾಲೂಕಿನಲ್ಲಿ ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಅಧಿವೇಶನದಲ್ಲಿ ಮಾತನಾಡುವುದಾಗಿ ತಿಳಿಸಿದರು.20 ಅಡಿ ಎತ್ತರದ ಬಿರ್ಸಾಮುಂಡಾ ಪ್ರತಿಮೆ ನಿರ್ಮಾಣ:
ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದ ಬಳಿ ಸುಮಾರು 20 ಅಡಿ ಎತ್ತರದ ಬಿರ್ಸಾಮುಂಡ ಪ್ರತಿಮೆಯನ್ನು ನಿರ್ಮಿಸಿ ಆ ಸ್ಥಳದಲ್ಲೇ ಮುಂದಿನ ವರ್ಷ ಬಿರ್ಸಾಮುಂಡಾ ಜಯಂತಿ ವಿಜೃಂಭಣೆಯಿಂದ ಆಚರಿಸೋಣ ಎಂದುಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆದಿವಾಸಿ ಮಕ್ಕಳು ಹಾಗೂ ಹಿರಿಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀನಿವಾಸ್, ಯೋಜನಾ ಸಮನ್ವಯ ಅಧಿಕಾರಿ ಎಂ.ಕೆ. ಮಲ್ಲೇಶ್, ಪ. ಕಲ್ಯಾಣ ವರ್ಗಗಳ ಅಧಿಕಾರಿ ಮಹೇಶ್, ಮುಖ್ಯಭಾಷಣಕಾರರಾದ ಬಿ.ಎಂ. ನಟರಾಜ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆಂಚಯ್ಯ, ರಾಜ್ಯ ಲ್ಯಾಂಪ್ಸ್ ಮಹಾಮಂಡಳಿ ಅಧ್ಯಕ್ಷ ಕಾವೇರ, ಮಕ್ಕಳ ತಜ್ಞ ಜಿ.ಎಸ್. ಕುಮಾರ್, ಲ್ಯಾಂಡ್ ಸೊಸೈಟಿ ಸಹಕಾರ ಸಂಘದ ತಾಲೂಕು ಅಧ್ಯಕ್ಷ ಕಾಳ ಕಲ್ಕರ್, ವನ್ಯಜೀವಿ ಮಂಡಳಿ ಕರ್ನಾಟಕ ಸರ್ಕಾರ ರಾಜ್ಯ ಸದಸ್ಯ ಚಿಕ್ಕಣ್ಣ, ಪದ್ಮಶ್ರೀ ಪುರಸ್ಕೃತ ಸೋಮಣ್ಣ, ಆದಿವಾಸಿ ಮುಖಂಡರಾದ ವಿಜಯಕುಮಾರ್, ಶೈಲೇಂದ್ರ, ಚಿಕ್ಕಬೊಮ್ಮ, ಮಾರೇಗೌಡ, ರಾಜು, ರಾಧಾ, ಮೀನರಾಜ, ಅಧಿಕಾರಿಗಳಾದ ಆರ್.ಎಫ್. ಸಿದ್ದರಾಜು, ಸಿಡಿಪಿಓ ದೀಪ, ಇಓಗಳಾದ ಧರಣೇಶ್, ಪ್ರೇಮ್ ಕುಮಾರ್, ಬಿಇಓ ಕಾಂತರಾಜು, ಶಶಿಕಲಾ, ಮುಖಂಡರಾದ ಸೌಮ್ಯ ಪರಶಿವಮೂರ್ತಿ ಮುದ್ದಯ್ಯ, ಜೀವಿಕ ಬಸವರಾಜು, ಶಿವಯ್ಯ, ಶಿವರಾಜು, ಮಿಲ್ ನಾಗರಾಜು, ಜಯರಾಮ, ವೇಣುಗೋಪಾಲ್, ಶೇಖರ್, ಕೃಷ್ಣ ಹಾಗೂ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಗೆ ಚಾಲನೆ:ಪಟ್ಟಣದ ವರದರಾಜ ಸ್ವಾಮಿ ದೇವಾಲಯದಿಂದ ಬೆಳ್ಳಿ ರಥದಲ್ಲಿ ಅಲಂಕರಿಸಿದ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಶಾಸಕ ಅನಿಲ್ ಚಿಕ್ಕಮಾದು ಪುಷ್ಪಾರ್ಜನೆ ಮಾಡಿ ಮೆರವಣಿಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಮಂಗಳವಾದ್ಯ ವೀರಗಾಸೆ, ಬೆಟ್ಟ ಕುರುಬ ಸಾಂಪ್ರದಾಯಿಕ ಡೋಲು ಕುಣಿತ, ಬಸವನಗಿರಿ ಆಡಿ ಬಿರ್ಸಾ ಮುಂಡ ವೇಷಭೂಷಣ, ದಡದಳ್ಳಿ ಹಾಡಿ ಕೋಲಾಟ, ಜಾಗನಕೋಟೆ ಆದಿವಾಸಿ ಮಹಿಳೆಯರ ನೃತ್ಯ, ನಗಾರಿ ಪ್ರಮುಖ ರಸ್ತೆಯಲ್ಲಿ ಸಾಗಿ ಅಂಬೇಡ್ಕರ್ ಭವನದಲ್ಲಿ ಮುಕ್ತಾಯವಾಯಿತು.