ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಭಾಗಿ: ಆರ್.ಅಶೋಕ್

| Published : Jun 29 2024, 12:32 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳ ಹೆಸರಲ್ಲಿ ಬೆಲೆ ಏರಿಕೆ ಮಾಡಿದೆ. ಹಾಲಿನ ಬೆಲೆ ಏರಿಕೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರೆ ಹೆಚ್ಚು ಹಾಲು ನೀಡಿದ್ದೇವೆ ಎನ್ನುತ್ತಾರೆ. ಆದರೆ ಹೆಚ್ಚಾದ ಹಣವನ್ನು ರೈತರಿಗೆ ಕೊಡುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ. ಕೇವಲ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ರು. ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭಾಗಿಯಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿಯಿಂದ ನಡೆದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಚಿವ ಬಿ.ನಾಗೇಂದ್ರ ಶೇ.೨೦ ರಷ್ಟು ತಿಂದಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ.೮೦ ರಷ್ಟು ಹಣ ತಿಂದಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಕುರಿತು ಸದನದಲ್ಲೂ ಆಗ್ರಹಿಸುತ್ತೇವೆ. ಸಿಎಂ ರಾಜೀನಾಮೆ ನೀಡುವವರೆಗೂ ಹೋರಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳ ಹೆಸರಲ್ಲಿ ಬೆಲೆ ಏರಿಕೆ ಮಾಡಿದೆ. ಹಾಲಿನ ಬೆಲೆ ಏರಿಕೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರೆ ಹೆಚ್ಚು ಹಾಲು ನೀಡಿದ್ದೇವೆ ಎನ್ನುತ್ತಾರೆ. ಆದರೆ ಹೆಚ್ಚಾದ ಹಣವನ್ನು ರೈತರಿಗೆ ಕೊಡುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ. ಕೇವಲ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ ಎಂದರು.

ಮರ್ಯಾದೆ ಇದ್ದಿದ್ದರೆ ರಾಜೀನಾಮೆ ಕೊಡಬೇಕಿತ್ತು:

ಒಕ್ಕಲಿಗ ಸ್ವಾಮೀಜಿಯವರು ಡಿ.ಕೆ.ಶಿವಕುಮಾರ್‌ರನ್ನು ಮುಖ್ಯಮಂತ್ರಿ ಮಾಡಲು ಹೇಳಿದ್ದಾರೆ. ಸಿದ್ದರಾಮಯ್ಯ ಧರ್ಮಾತ್ಮ ಅಲ್ಲ ಎಂದೇ ಸ್ವಾಮೀಜಿ ಪರೋಕ್ಷವಾಗಿ ಹೇಳಿದ್ದರೂ, ಡಿ.ಕೆ.ಶಿವಕುಮಾರ್ ಮೌನವಾಗಿದ್ದರು. ಮಾನ ಮರ್ಯಾದೆ ಇದ್ದಿದ್ದರೆ ಸಿದ್ದರಾಮಯ್ಯ ವೇದಿಕೆಯಲ್ಲೇ ರಾಜೀನಾಮೆ ನೀಡಿ ಹೋಗಬೇಕಿತ್ತು ಎಂದರು.

ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾಟದಿಂದ ತಪ್ಪಿಸಿಕೊಳ್ಳಲು ಡಿ.ಕೆ.ಸುರೇಶ್ ರನ್ನು ಸೋಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಸ್ವಾಮೀಜಿ ಕೈಯಲ್ಲಿ ಹೇಳಿಕೆ ಕೊಡಿಸಿದ್ದಾರೆ. ಇದರ ನಡುವೆ ಮೂರು ಡಿಸಿಎಂ ಬೇಕೆಂದು ಸಚಿವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಶಾಪದಿಂದಲೇ ಸರ್ಕಾರ ಬೀಳಲಿದೆ ಎಂದರು.